ಅಮೃತಸರ: ಕಳೆದ ಒಂದು ವರ್ಷದಿಂದ ತಮ್ಮ ಸಮಾಜಸೇವೆಯ ಮೂಲಕ ಜನ ಸಾಮಾನ್ಯರಿಂದ ಚಾಂಪಿಯನ್ ಎಂದು ಗುರುತಿಸಿಕೊಂಡಿರುವ ಸೋನು ಸೂದ್, ಈಗ ಇನ್ನೊಂದು ಸಾಮಾಜಿಕ ಕಳಕಳಿಯ ಕೆಲಸಕ್ಕೆ ಕೈಜೋಡಿಸಿದ್ದಾರೆ. ‘ಸಂಜೀವನಿ - ಎ ಶಾಟ್ ಆಫ್ ಲೈಫ್’ ಎಂಬ ಅಭಿಯಾನದ ಬ್ರಾಂಡ್ ಅಂಬಾಸಿಡರ್ ಆಗಿ ಅವರು ಆಯ್ಕೆಯಾಗಿದ್ದಾರೆ.
ಒಂಬತ್ತು ತಿಂಗಳ ಈ ಸುದೀರ್ಘ ಅಭಿಯಾನವನ್ನು ಮೂರು ಉದ್ದೇಶಗಳಿಂದ ರೂಪಿಸಲಾಗಿದೆ. ರೋಗನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳುವ ಬಗ್ಗೆ ಜಾಗೃತಿ ಮೂಡಿಸುವುದು, ಲಸಿಕೆಯ ಕುರಿತಾದ ಹಿಂಜರಿಕೆಯನ್ನು ಹೋಗಲಾಡಿಸುವುದು ಮತ್ತು ಸಮಾಜದಲ್ಲಿ ಹಿಂದುಳಿದ ಹಾಗೂ ಗ್ರಾಮೀಣರಿಗೂ ಲಸಿಕೆ ದೊರೆಯುವಂತೆ ಮಾಡುವ ಮೂಲಕ ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳುವ ದೂರದೃಷ್ಟಿ ಈ ಅಭಿಯಾನದ್ದಾಗಿದೆ.
ಸಾಧ್ಯವಾದಷ್ಟು ಬೇಗ ಸಮಾಜದ ಗರಿಷ್ಠ ಜನರನ್ನು ತಲುಪಲು ಮತ್ತು ಚುಚ್ಚುಮದ್ದನ್ನು ಪಡೆದುಕೊಳ್ಳುವಂತೆ ಪ್ರೋತ್ಸಾಹಿಸುವ ಪ್ರಯತ್ನದಲ್ಲಿ, ಈ ಅಭಿಯಾನ ಪ್ರಾರಂಭವಾಗಿದ್ದು, ಅಮೃತಸರದಲ್ಲಿ ಪ್ರಾರಂಭವಾದ ಈ ಅಭಿಯಾನದಲ್ಲಿ ಇಂದು ಲಸಿಕೆಯ ಮೊದಲ ಡೋಸ್ ಪಡೆಯುವ ಮೂಲಕ ಸೋನು ಸೂದ್ ಗ್ರೀನ್ ಸಿಗ್ನಲ್ ನೀಡಿದ್ದಾರೆ. ಅಮೃತಸರ, ನಾಸಿಕ್, ಇಂದೋರ್, ಗುಂಟೂರು ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಕೋವಿಡ್ ವ್ಯಾಕ್ಸಿನೇಷನ್ ಶಿಬಿರಗಳನ್ನು ಆಯೋಜಿಸಲಿದೆ.
ಈ ಅಭಿಯಾನದ ಮೂಲಕ ವ್ಯಾಕ್ಸಿನೇಷನ್ ಮತ್ತು ರೋಗನಿರೋಧಕತೆಯ ಮಹತ್ವದ ಬಗ್ಗೆ ಜನರಿಗೆ ತಿಳಿಸುವುದಕ್ಕೆ ಸೋನು ಹೊರಟಿದ್ದು, 'ಈ ಪ್ರಯತ್ನದಲ್ಲಿ, ನಾವೆಲ್ಲರೂ ಒಗ್ಗೂಡಿ ಸಮಾಜದ ಸುಧಾರಣೆಯತ್ತ ಕೆಲಸ ಮಾಡಬೇಕು' ಎನ್ನುತ್ತಾರೆ.