ಸಿನಿವಾಣಿ

'ವೇದ' ಚಿತ್ರಕ್ಕೆ ಹಾಡುಗಳ ರೆಕಾರ್ಡಿಂಗ್​ ಶುರು ...

chetannadiger

ಬೆಂಗಳೂರು: ಶಿವರಾತ್ರಿಯಂದು ಶಿವರಾಜಕುಮಾರ್​ ಅಭಿನಯದ 'ವೇದ' ಎಂಬ ಚಿತ್ರದ ಮೊದಲ ಪೋಸ್ಟರ್​ ಬಿಡುಗಡೆಯಾಗಿದ್ದು ನೆನಪಿದೆಯಾ? ಆ ನಂತರ ಆ ಚಿತ್ರದ ಬಗ್ಗೆ ಎಲ್ಲೂ ಸುದ್ದಿಯಾಗಿರಲಿಲ್ಲ. ಈಗ ಸದ್ದಿಲ್ಲದೆ, ಆ ಚಿತ್ರದ ಕೆಲಸಗಳು ಪ್ರಾರಂಭವಾಗಿವೆ.

ಶುಕ್ರವಾರ, ಅರ್ಜುನ್​ ಜನ್ಯ ಸ್ಟುಡಿಯೋದಲ್ಲಿ 'ವೇದ' ಚಿತ್ರದ ಹಾಡುಗಳ ರೆಕಾರ್ಡಿಂಗ್​ ಪ್ರಾರಂಭವಾಗಿದೆ. ಈ ಸಂದರ್ಭದಲ್ಲಿ ಶಿವರಾಜಕುಮಾರ್​, ಅರ್ಜುನ್​ ಜನ್ಯ, ನಿರ್ದೇಶಕ ಎ. ಹರ್ಷ, ಗೀತಾ ಶಿವರಾಜಕುಮಾರ್​, ಕೆ.ಪಿ. ಶ್ರೀಕಾಂತ್​ ಮುಂತಾದವರು ಹಾಜರಿದ್ದರು.

'ವೇದ', ಶಿವರಾಜಕುಮಾರ್​ ಅವರ 125ನೇ ಚಿತ್ರವಾಗಿದ್ದು, ಈ ಚಿತ್ರದ ಮೂಲಕ ಗೀತಾ ಶಿವರಾಜಕುಮಾರ್​ ಮೊದಲ ಬಾರಿಗೆ ನಿರ್ಮಾಪಕರಾಗುತ್ತಿದ್ದಾರೆ. ಗೀತಾ ಪಿಕ್ಚರ್ಸ್​ ಎಂಬ ಸಂಸ್ಥೆಯನ್ನು ಅವರು ಹುಟ್ಟುಹಾಕಿದ್ದು, ಇದರಡಿ ಅವರು ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. 60ರ ದಶಕದ ಕಾಲಘಟ್ಟದ ಕಥೆ ಈ ಚಿತ್ರದಲ್ಲಿದ್ದು, ಎ. ಹರ್ಷ ನಿರ್ದೇಶನ ಮಾಡುತ್ತಿದ್ದಾರೆ. ಇನ್ನು, ಸ್ವಾಮಿ ಗೌಡ ಅವರ ಛಾಯಾಗ್ರಹಣ ಮತ್ತು ಅರ್ಜುನ್​ ಜನ್ಯ ಅವರ ಸಂಗೀತ ಈ ಚಿತ್ರಕ್ಕಿದೆ.

ಸದ್ಯ, ಶಿವರಾಜಕುಮಾರ್​ ಅವರ 124ನೇ ಚಿತ್ರವಾದ 'ನೀ ಸಿಗೋವರೆಗೂ' ಚಿತ್ರೀಕರಣ ನಡೆಯುತ್ತಿದ್ದು, ಇದು ಮುಗಿಯುತ್ತಿದ್ದಂತೆಯೇ 'ವೇದ' ಚಿತ್ರೀಕರಣ ಪ್ರಾರಂಭವಾಗಲಿದೆ ಎಂದು ಹೇಳಲಾಗುತ್ತಿದೆ.