ಬಾಲಿವುಡ್ ನಟಿ ಹಾಗೂ ನಟ ಅನಿಲ್ ಕಪೂರ್ ಅವರ ಪುತ್ರಿ ಸೋನಮ್ ಕಪೂರ್ ಹಾಗೂ ಆನಂದ್ ಅಹುಜಾ ಬಹುತೇಕ ಎಲ್ಲರಿಗೂ ಚಿರಪರಿಚಿತರು. ಸದಾ ತಮ್ಮ ಸಿನಿಮಾಗಳ ಮೂಲಕ ಅಥವಾ ಫ್ಯಾಶನ್ ಸೆನ್ಸ್ ನಿಂದ ಸುದ್ದಿಯಲ್ಲಿರುವ ನಟಿ ಸೋನಮ್ ಕಪೂರ್ ಈಗ ತಮ್ಮ ಪತಿಯ ಕಾರಣಕ್ಕೆ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡುತ್ತಿದ್ದಾರೆ. ಹೌದು, ಆನಂದ್ ಅಹುಜಾ ವಿರುದ್ಧ ಒಂದು ಗಂಭೀರ ಆರೋಪ ಕೇಳಿ ಬಂದಿದೆ. ಅಂತಾರಾಷ್ಟ್ರೀಯ ಇ-ಕಾಮರ್ಸ್ ಸೈಟ್ ಆದ @MyUS_shopaholic, ಆನಂದ್ ಅಹುಜಾ ಅವರು ತೆರಿಗೆ ಮತ್ತು ಸುಂಕ ಪಾವತಿಸಿಲ್ಲ ಎಂಬ ಗಂಭೀರ ಆರೋಪಿ ಹೊರಿಸಿದೆ.
ಅಂದಹಾಗೆ, ಫೆಬ್ರವರಿ 11 ರಂದು ಆನಂದ್ ಅವರು ಇದೇ ಶಿಪ್ಪಿಂಗ್ ಕಂಪನಿಯ ಮೇಲೆ ಆರೋಪ ಮಾಡಿದ್ದರು. ಈಗ ಅದೇ ಕಂಪನಿ ಆನಂದ್ ಅವರ ಮೇಲೆ ಪ್ರತ್ಯಾರೋಪ ಮಾಡಿದೆ. ಆನಂದ್ ಅಹುಜಾ ತಮ್ಮ ಗ್ರಾಹಕ ಸೇವೆಗಾಗಿ ಅಂತಾರಾಷ್ಟ್ರೀಯ ಶಾಪ್ಪಿಂಗ್ ಕಂಪನಿಯ ವಿರುದ್ಧ ಟ್ವೀಟ್ ಮಾಡಿದ್ದರು. ಆದರೆ, ಈಗ ಆ ಕಂಪನಿ ಆನಂದ್ ಅಹುಜಾ ವಿರುದ್ಧ ಆರೋಪ ಮಾಡಿದ್ದು, ತೆರಿಗೆ ಮತ್ತು ಸುಂಕ ಪಾವತಿಯನ್ನು ತಪ್ಪಿಸಲು ಆನಂದ್ ಅಹುಜಾ ತಪ್ಪು ದಾಖಲೆ ನೀಡಿದ್ದಾರೆ ಎನ್ನುತ್ತಿದೆ. ಆನಂದ್ ಅಹುಜಾ ಅವರ ಟ್ವೀಟ್‌ಗೆ ಪ್ರತಿಕ್ರಿಯಿಸಿದ ಕಂಪನಿ, "ಸಮಸ್ಯೆಯಾಗಿರುವುದು ಅವರ ಸೇವೆಗಳಿಂದಲ್ಲ, ಬದಲಾಗಿ ಆನಂದ್ ಒದಗಿಸಿದ ದಾಖಲೆಗಳು ಸರಿಯಿಲ್ಲದ ಕಾರಣ." ಎಂದು ಟ್ವೀಟ್ ಮಾಡಿದೆ.
ಇನ್ನು "ಆನಂದ್ ಅಹುಜಾ ಅವರು ಟ್ವೀಟ್‌ನಲ್ಲಿ ಉಲ್ಲೇಖಿಸಿದಂತೆ, ನಾವು ವಸ್ತುಗಳನ್ನು ಹಿಡಿದಿಟ್ಟುಕೊಂಡಿಲ್ಲ. ಇದು ಗ್ರಾಹಕ ಸೇವೆಯ ಗುಣಮಟ್ಟದ ಪ್ರಶ್ನೆಯಲ್ಲ. ಆನಂದ್ ಖರೀದಿ ಮಾಡಿದ ಸ್ನೀಕರ್ಸ್ ಬೆಲೆಯನ್ನು ತಪ್ಪಾಗಿ ನೀಡಿದ್ದಾರೆ. ಇದರಿಂದಾಗಿ ಅವರು ಕಡಿಮೆ ಮೊತ್ತದ ತೆರಿಗೆ ಮತ್ತು ಸುಂಕ ಪಾವತಿ ಮಾಡದಂತಾಗುತ್ತದೆ." ಎಂದು ಕಂಪನಿ ತಿಳಿಸಿದೆ. ಇದಕ್ಕೆ, ಆನಂದ್ ಅಹುಜಾ ಅವರು ಉತ್ತರಿಸಿದ್ದು 'ಇದು ಸುಳ್ಳು ಆರೋಪ' ಎಂದಿದ್ದಾರೆ. ಸದ್ಯ, ಅಂತಾರಾಷ್ಟ್ರೀಯ ಇ-ಕಾಮರ್ಸ್ ಸೈಟ್ @MyUS_shopaholic ಹಾಗೂ ಆನಂದ್ ಅಹುಜಾ ಅವರ ಟ್ವೀಟ್ಗಳು ಎಲ್ಲೆಡೆ ವೈರಲ್ ಆಗುತ್ತಿವೆ.