ಸಿನಿವಾಣಿ

ಟ್ರೋಲ್​ಗೆ ಹೆದರಿದ ಸೋನಾಕ್ಷಿ ಸಿನ್ಹಾ...! ಟ್ವಿಟರ್ ಖಾತೆ ಡಿ- ಆ್ಯಕ್ಟಿವೇಟ್

ನವದೆಹಲಿ: ಸುಶಾಂತ್ ಸಿಂಗ್ ರಜಪೂತ್ ಆತ್ಮಹತ್ಯೆ ಬೆನ್ನಲ್ಲೇ ಒಂದಷ್ಟು ಬಾಲಿವುಡ್ ಮಂದಿಗೆ ನಡುಕ ಶುರುವಾಗಿದೆ. ಸ್ವಜನಪಕ್ಷಪಾತದ ಆರೋಪ ಹೊತ್ತಿರುವ ಕರಣ್ ಜೋಹರ್, ಸಲ್ಮಾನ್ ಖಾನ್, ಯಶ್ ರಾಜ್ ಫಿಲಂಸ್ ಸೇರಿ ಹಲವು ಕಂಪನಿಗಳಿಗೆ ಸುಶಾಂತ್ ಸಾವು ನುಂಗಲಾರದ ತುಪ್ಪವಾಗಿ ಪರಿಣಮಿಸಿದೆ.

ಅಷ್ಟೇ ಅಲ್ಲ ಸಿನಿಮಾ ಕುಟುಂಬದಿಂದ ಬಂದ ಕುಡಿಗಳಿಗೆ ಸೋಷಿಯಲ್ ಮೀಡಿಯಾಗಳಲ್ಲಿ ನೆಟ್ಟಿಗರು ಸರಿಯಾಗಿಯೇ ತರಾಟೆ ತೆಗೆದುಕೊಂಡು, ಅನ್​ಫಾಲೋ ಮಾಡುವ ಮೂಲಕ ಬಹಿಷ್ಕರಿಸುತ್ತಿದ್ದಾರೆ. ಇದೆಲ್ಲದಕ್ಕೂ ಹೆದರಿದ ಶತ್ರುಘ್ನ ಸಿನ್ಹಾ ಪುತ್ರಿ ಸೋನಾಕ್ಷಿ ಸಿನ್ಹಾ, ಹೊಸ ಉಪಾಯವೊಂದನ್ನು ಮಾಡಿದ್ದಾರೆ. ನೇರವಾಗಿ ಟ್ವಿಟರ್ ಖಾತೆಯನ್ನು ಡಿ-ಆಕ್ಟಿವೇಟ್ ಮಾಡಿ ಒಂದಷ್ಟು ದಿನ ಇದೆಲ್ಲದರಿಂದ ದೂರ ಹೋಗುವ ಸೂಚನೆ ನೀಡಿದ್ದಾರೆ.

ಈ ಬಗ್ಗೆ ಸ್ವತಃ ಪೋಸ್ಟ್ ಮಾಡಿಕೊಂಡಿರುವ ಸೋನಾಕ್ಷಿ, ‘ಮೊದಲು ನಮ್ಮನ್ನು ನಾವು ಕಾಪಾಡಿಕೊಳ್ಳಬೇಕೆಂದರೆ, ನಮ್ಮ ಶುಚಿತ್ವ ಮಹತ್ವದ್ದು. ಅದು ನೆಗೆಟಿವಿಟಿ ತೊಡೆದುಹಾಕುತ್ತದೆ. ಅದರಲ್ಲೂ ಇಂಥ ದಿನಮಾನಗಳಲ್ಲಿ ಟ್ವಿಟರ್​ನಿಂದಲೂ ದೂರ ಇರುವುದು ತುಂಬ ಒಳ್ಳೆಯದು. ಹಾಗಾಗಿ ನಾನು ನನ್ನ ಟ್ವಿಟರ್ ಖಾತೆಯನ್ನು ಡಿ-ಆಕ್ಟಿವೇಟ್ ಮಾಡುತ್ತಿದ್ದೇನೆ’ ಎಂದು ಬರೆದುಕೊಂಡಿದ್ದಾರೆ. ‘ರೇಸ್ 3’ ಖ್ಯಾತಿಯ ನಟ ಸಕಿಬ್ ಸಲೀಮ್ ಸಲ್ಮಾನ್ ಖಾನ್ ಅಳಿಯ ಆಯುಷ್ ಶರ್ವ, ನಿರ್ದೇಶಕ ಶಶಾಂಕ್ ಖೈತಾನ್, ಗಾಯಕಿ ನೇಹಾ ಭಾಸಿನ್ ಸೇರಿ ಇನ್ನೂ ಹಲವರು ಟ್ವಿಟರ್​ಗೆ ಗುಡ್ ಬೈ ಹೇಳಿದ್ದಾರೆ.