ಕಿಚ್ಚ ಸುದೀಪ್​ 
ಸಿನಿವಾಣಿ

ನಟ ಸುದೀಪ್​ಗೆ ಬೆದರಿಕೆ ಪತ್ರ ಪ್ರಕರಣ: ಆ ಒಬ್ಬನಿಗಾಗಿ ಸಿಸಿಬಿ ಪೊಲೀಸರಿಂದ ತೀವ್ರ ಹುಡುಕಾಟ

ಬೆಂಗಳೂರು: ನಟ ಸುದೀಪ್​ಗೆ ಬೆದರಿಕೆ ಪತ್ರ ಪ್ರಕರಣದ ತನಿಖೆ ನಡೆಸುತ್ತಿರುವ ಸಿಸಿಬಿ ಅಧಿಕಾರಿಗಳಿಗೆ ಮಹತ್ವದ ಮಾಹಿತಿ ಸಿಕ್ಕಿದೆ. ಜೊತೆಯಲ್ಲಿ ಇದ್ದವರಿಂದಲೇ ಸುದೀಪ್​ ವಿರುದ್ಧ ಕ್ರಿಮಿನಲ್​ ಸಂಚು ರೂಪಿಸಿರುವ ಶಂಕೆ ವ್ಯಕ್ತವಾಗಿದೆ. ಅದಕ್ಕೆ ಪೂರಕವಾದ ಒಂದಿಷ್ಟು ಅಂಶಗಳು ತನಿಖೆಯಲ್ಲಿ ಬಯಲಾಗಿದೆ.

ಪೊಲೀಸರ ಶಂಕೆ ಖಚಿತವಾದರೆ ಜೊತೆಯಲಿದ್ದವರಿಗೆ ಜೈಲು ಶಿಕ್ಷೆ ಖಚಿತವಾಗಲಿದೆ. ಈಗಾಗಲೆ ಸಿನಿರಂಗದವರ ಕೈವಾಡವಿದೆ ಅಂತ ಸುದೀಪ್​ ನೇರವಾಗಿ ಆರೋಪ ಮಾಡಿದ್ದಾರೆ. ಸುದೀಪ್ ಜೊತೆಯಲ್ಲಿದ್ದವರನ್ನು ಸಿನಿ ರಂಗದ ವ್ಯಕ್ತಿಯೊಬ್ಬ ಬಳಸಿಕೊಂಡಿರುವ ಬಲವಾದ ಗುಮಾನಿ ಪೊಲೀಸರಿಗೆ ಇದೆ.

ಶಂಕೆಗೆ ಕಾರಣವಾದ ಪೂರಕ ಹಾಗೂ ಸಾಂದರ್ಭಿಕ ಸಾಕ್ಷಿಗಳು ಪೊಲೀಸರಿಗೆ ಲಭ್ಯ‌ವಾಗಿದೆ. ಹೀಗಾಗಿ ಪುಟ್ಟೇನಹಳ್ಳಿ ಪೊಲೀಸರು ಹಾಗೂ ಸಿಸಿಬಿ ತಂಡ ಆ ವ್ಯಕ್ತಿಗಾಗಿ ತೀವ್ರ ಹುಡುಕಾಟ ನಡೆಸಿದ್ದಾರೆ. ಆ ಪತ್ರದಲ್ಲಿರುವ ಕೆಲ ಅಂಶಗಳ ಆಧಾರ ಮೇಲೆ ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ. ಪತ್ರದಲ್ಲಿ ಆರ್​ಆರ್ ನಗರ, ಶೆರ್ಟಾನ್ ಹೊಟೇಲ್, ಪಂಜಾಬಿ ಹುಡುಗಿ ಎಂದೆಲ್ಲ ಉಲ್ಲೇಖಿಸಿದ್ದು, ಸುದೀಪ್ ಆಪ್ತ ಎನಿಸಿಕೊಂಡಿರುವ ವ್ಯಕ್ತಿಯಿಂದ ಅಥವಾ ಆತನನ್ನು ಬಳಸಿಕೊಂಡು ಬೆದರಿಕೆ ಹಾಕಿರುವ ಸಾಧ್ಯತೆ ಇದೆ.

ಸುದೀಪ್ ಕಾರು ಚಾಲಕನ ಮೇಲೆ ಪೊಲೀಸರಿಗಿದೆ ಬಲವಾದ ಶಂಕೆ. ಹೀಗಾಗಿ ಇತ್ತೀಚೆಗೆ ಕೆಲಸ ಬಿಟ್ಟಿದ್ದ ಕಾರು ಚಾಲಕನಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ. ಸುದೀಪ್​ ಅವರು ಕೆಲ ಕಾರಣದಿಂದ ಕೆಲಸದಿಂದ ತೆಗೆದುಹಾಕಿದ್ದರು. ಅದರ ಸೇಡು ತೀರಿಸಿಕೊಳ್ಳಲು ಸಂಚು ನಡೆಯುತ್ತಿದೆಯಾ ಎಂಬ ಗುಮಾನಿ ಹಬ್ಬಿದೆ.

ಚಾಲಕನ ಜತೆ ಸೇರಿ ಚಿತ್ರರಂಗದ ಸುದೀಪ್ ವಿರೋಧಿಗಳು ಷಡ್ಯಂತ್ರ ನಡೆಸಿರುವ ಸಾಧ್ಯತೆ ಇದೆ. ಪತ್ರ ಬರೆದಿದ್ದು ಯಾರು? ಆತನ ಬಳಿ ಇರುವ ಸಾಕ್ಷಿಗಳೇನು? ವಿಡಿಯೋಗಳು ನಿಜಕ್ಕೂ ಇದೆಯಾ? ವೀಡಿಯೋ ಇದ್ದರೆ ಅದನ್ನ ಬ್ಲಾಕ್​​ಮೇಲ್​ಗೆ ಬಳಸಲು ಇಚ್ಚಿಸಿದ್ದನಾ? ಎಂಬ ಅಂಶಗಳ ಬಗ್ಗೆ ಸಿಸಿಬಿ ಅಧಿಕಾರಿಗಳ ತನಿಖೆ ಮುಂದುವರಿದಿದೆ. (ದಿಗ್ವಿಜಯ ನ್ಯೂಸ್​)