ಸಿನಿವಾಣಿ

ರೀಲ್ಸ್​ ಜೋಡಿಯ ಬ್ರೇಕಪ್​ ಕಹಾನಿ! ವರುಣ್​-ವರ್ಷಾ ಮಧ್ಯೆ ಮತ್ತೊಬ್ಬಳ ಎಂಟ್ರಿ, ಗುಟ್ಟು ಬಿಚ್ಚಿಟ್ಟ ಕಾವೇರಿ

ಬೆಂಗಳೂರು: ಸಾಮಾಜಿಕ ಜಾಲತಾಣ ಬಳಸುವವರಿಗೆ ವರ್ಷಾ ಕಾವೇರಿ ಮತ್ತು ವರುಣ್ ಆರಾಧ್ಯ ಹೆಸರಿನ ಪರಿಚಯ ಇದ್ದೇ ಇರುತ್ತದೆ. ಹಲವು ವರ್ಷಗಳಿಂದ ಪ್ರೀತಿ ಮಾಡುತ್ತಿದ್ದ ಈ ಜೋಡಿ ರೀಲ್ಸ್​ ಮೂಲಕವೇ ಮನೆ ಮಾತಾಗಿದ್ದರು. ಅಲ್ಲದೆ, ಟ್ರೋಲಿಗರ ಫೇವರಿಟ್​ ಸಹ ಆಗಿದ್ದರು.​ ಆದರೆ, ಇಬ್ಬರ ಸಂಬಂಧದಲ್ಲಿ ಇದೀಗ ಬಿರುಕು ಮೂಡಿದ್ದು, ಬ್ರೇಕಪ್​ ಮಾಡಿಕೊಂಡಿರುವ ಬಗ್ಗೆ ಸ್ವತಃ ವರ್ಷ ಕಾವೇರಿ ಇನ್​ಸ್ಟಾಗ್ರಾಂ ಮೂಲಕ ತಿಳಿಸಿದ್ದಾರೆ.

ಇನ್​ಸ್ಟಾಗ್ರಾಂ ಪ್ರೊಫೈಲ್​ ಪ್ರಕಾರ ವರ್ಷಾ ಕಾವೇರಿ, ಮೇಕಪ್​ ಆರ್ಟಿಸ್ಟ್​ ಮತ್ತು ಕ್ರಿಯೇಟಿವ್​ ಕ್ರಿಯೆಟರ್​. 6 ಲಕ್ಷ ಕ್ಕೂ ಅಧಿಕ ಫಾಲೋವರ್ಸ್​ ಹೊಂದಿದ್ದಾರೆ. ಅವರ ಖಾತೆಯಲ್ಲಿ ವರುಣ್​ ಜತೆಗೆ ರೀಲ್ಸ್​ ಮಾಡಿದ ವಿಡಿಯೋಗಳೇ ತುಂಬಿರುತ್ತಿದ್ದವು. ಆದರೆ, ಇತ್ತೀಚೆಗೆ ಜೋಡಿ ವಿಡಿಯೋಗಳು ಕಾಣೆಯಾಗಿದ್ದು, ಈ ಬಗ್ಗೆ ಅವರ ಫಾಲೋವರ್ಸ್​ ಮಾಡಿದ್ದ ಪ್ರಶ್ನೆಗೆ ವರ್ಷಾ ಕಾವೇರಿ ಇನ್​ಸ್ಟಾಗ್ರಾಂ ಪೋಸ್ಟ್​ ಮೂಲಕವೇ ಉತ್ತರ ನೀಡಿದ್ದಾರೆ.

ಪೋಸ್ಟ್​ನ ಸಾರಾಂಶ 

ಎಲ್ಲರಿಗೂ ನಮಸ್ಕಾರ ಹಲವು ದಿನಗಳಿಂದ ನೀವೆಲ್ಲ ಕೇಳುತ್ತಿದ್ದ ಒಂದೇ ಒಂದು ಸಾಮಾನ್ಯ ಪ್ರಶ್ನೆ ಏನೆಂದರೆ ನನ್ನ ಮತ್ತು ವರುಣ್​ ನಡುವೆ ಏನಾಯಿತು ಎಂದು. ನಾನಿಂದು ಅದರ ಬಗ್ಗೆ ಮಾತನಾಡುತ್ತೇನೆ. ನಾನು ಮತ್ತು ವರುಣ್​ ಸುಮಾರು ವರ್ಷಗಳಿಂದ ಪ್ರೀತಿ ಮಾಡುತ್ತಿದ್ದದ್ದು ನಿಮಗೆಲ್ಲ ಗೊತ್ತೇ ಇದೆ. ಆದರೆ, ನಿಮಗೆ ಗೊತ್ತಿಲ್ಲದ ಸಂಗತಿ ಏನೆಂದರೆ ವರುಣ್​ ನನ್ನನ್ನು ಬಿಟ್ಟು ಮತ್ತೊಂದು ಹುಡುಗಿಯನ್ನು ಲವ್​ ಮಾಡುತ್ತಿದ್ದಾರೆ. ನಾನಿಲ್ಲಿ ಆ ಹುಡುಗಿಯ ಹೆಸರನ್ನು ಹೇಳಿ ಆಕೆಯ ಜೀವನವನ್ನು ಹಾಳು ಮಾಡಲು ಬಯಸುವುದಿಲ್ಲ. ಇದೇ ವಿಚಾರವಾಗಿ ನಮ್ಮಿಬ್ಬರ ನಡುವೆ ಸಾಕಷ್ಟು ಬಾರಿ ವಾಗ್ವಾದ ನಡೆದಿದೆ. ಅವನಿಗೆ ಎಷ್ಟು ಬಾರಿ ಹೇಳಿದರೂ ಆ ಹುಡುಗಿಯನ್ನು ಬಿಡಲು ತಯಾರಿಲ್ಲ. ನಾನು ನಿನ್ನನ್ನು ಪ್ರೀತಿಸಲು ಬಯಸುವುದಿಲ್ಲ, ನಾನು ಆ ಹುಡುಗಿಯೊಂದಿಗೆ ನನ್ನ ಜೀವನವನ್ನು ನಡೆಸಲು ನಿರ್ಧರಿಸುತ್ತೇನೆ ಎಂದು ಆತ ಹೇಳಿದಾಗ ಅದು ನನಗೆ ತುಂಬಾ ನೋವುಂಟು ಮಾಡಿದೆ. ಅದಕ್ಕಾಗಿಯೇ ನಾನು ಕಳೆದ ಕೆಲವು ತಿಂಗಳುಗಳಿಂದ ನನ್ನ ಮತ್ತು ವರುಣ್‌ನ ವಿಡಿಯೋಗಳನ್ನು ಅಪ್‌ಲೋಡ್ ಮಾಡುತ್ತಿಲ್ಲ. ನಮ್ಮನ್ನು ಪ್ರೀತಿಸುವವರಿಗೆ ಈ ವಿಚಾರವನ್ನು ಹೇಳದಿದ್ದರೆ ನಾನೇ ಮೋಸ ಮಾಡಿಕೊಂಡಂತೆ ಅನಿಸುತ್ತದೆ. ಹೀಗಾಗಿ ನಾನಿಂದು ನಿಮಗೆ ತಿಳಿಸುತ್ತಿದ್ದೇನೆ. ಇನ್ನು ಮುಂದೆ ನನ್ನ ಮತ್ತು ವರುಣ್​ ನಡುವೆ ಯಾವುದೇ ಪ್ರೇಮ ಸಂಬಂಧ ಇರುವುದಿಲ್ಲ. ಅವನು ಆ ಹುಡುಗಿಯೊಂದಿಗೆ ಸಂತೋಷವಾಗಿರಲಿ. ನನ್ನ ಕುಟುಂಬ ನನ್ನ ಮೇಲೆ ಸಾಕಷ್ಟು ನಂಬಿಕೆ ಇಟ್ಟಿದೆ. ನಾನು ಅವರಿಗಾಗಿ ನನ್ನ ಜೀವನವನ್ನು ನಡೆಸಬೇಕಿದೆ. ಹೀಗಾಗಿ ನನಗೆ ಅನಿಸಿದ್ದನ್ನು ನಿಮಗೆ ಹೇಳಿದ್ದೇನೆ. ಇನ್ನು ಮುಂದೆ ನನ್ನ ಜೀವನವೇ ನನ್ನ ಮಾರ್ಗವಾಗಿದ್ದು, ನೀವು ಇದನ್ನು ಅರ್ಥಮಾಡಿಕೊಳ್ಳುತ್ತೀರಿ ಎಂದು ಭಾವಿಸುತ್ತೇನೆ. ನಿಮ್ಮೆಲ್ಲರ ಪ್ರೀತಿ ಹೀಗೆ ಇರಲಿ ಮತ್ತು ಇನ್ನು ಮುಂದೆಯೂ ನನ್ನನ್ನು ಬೆಂಬಲಿಸಿ, ಧನ್ಯವಾದಗಳು ಎಂದು ವರ್ಷಾ ಸುದೀರ್ಘವಾಗಿ ಬರೆದುಕೊಂಡಿದ್ದಾರೆ.

ಮೋಡಿ ಮಾಡಿದ್ದ ಜೋಡಿ

ವರುಣ್​ ಮತ್ತು ವರ್ಷಾ ಸಾಮಾಜಿಕ ಜಾಲತಾಣದಲ್ಲಿ ಪಡೆದಿದ್ದ ಖ್ಯಾತಿ ಅವರನ್ನು ಧಾರಾವಾಹಿಯೊಂದರ ಅತಿಥಿ ಪಾತ್ರದವರೆಗೂ ಕರೆದೊಯ್ದಿತ್ತು. ಇಬ್ಬರ ಮನೆಯವರೂ ಕೂಡ ಅವರ ಪ್ರೀತಿಯನ್ನು ಒಪ್ಪಿಕೊಂಡಿತ್ತು. ಆಗಾಗ ಕುಟುಂಬದ ಜತೆಗೂ ವಿಡಿಯೋಗಳನ್ನು ಮಾಡಿ ಪೋಸ್ಟ್​ ಮಾಡುತ್ತಿದ್ದರು. ಇದ್ದರೆ ಇವರ ರೀತಿ ಇರಬೇಕು ಅಂತಾ ಎಷ್ಟೋ ಮಂದಿ ಮಾತನಾಡಿಕೊಳ್ಳುವಂತೆ ಈ ಜೋಡಿ ಜಾಲತಾಣದಲ್ಲಿ ಮೋಡಿ ಮಾಡಿತ್ತು. ಆದರೆ, ಇದೀಗ ಇಬ್ಬರ ನಡುವೆ ಬ್ರೇಕಪ್​ ಆಗಿರುವುದು ಅವರ ಫಾಲೋವರ್ಸ್​ಗೆ ಶಾಕಿಂಗ್​ ಸಂಗತಿಯಾಗಿದೆ. ವರುಣ್​ ವಂಚನೆ ಮಾಡಿರುವುದಾಗಿ ವರ್ಷಾ ತಿಳಿಸಿದ್ದು, ಆಕೆಯ ಸಾಮಾಜಿಕ ಜಾಲತಾಣದಲ್ಲಿ ಫಾಲೋವರ್ಸ್​ ಧೈರ್ಯ ತುಂಬುತ್ತಿದ್ದಾರೆ.

ಬಿಗ್​ಬಾಸ್​ ಎಂಟ್ರಿ

ಈಗಾಗಲೇ ಕಲರ್ಸ್​ ಕನ್ನಡದಲ್ಲಿ ಬಿಗ್​ಬಾಸ್​ ಸೀಸನ್​ 10ರ ತಯಾರಿ ಆರಂಭವಾಗಿದೆ. ವರುಣ್​ ಮತ್ತು ವರ್ಷಾ ಬಿಗ್​ಬಾಸ್​ಗೆ ಕಾರ್ಯಕ್ರಮಕ್ಕೆ ಒಟ್ಟಿಗೆ ಎಂಟ್ರಿ ಕೊಡಲಿದ್ದಾರೆ ಎಂದು ಸುದ್ದಿಯಾಗಿತ್ತು. ಆದರೆ, ಇದೀಗ ಇಬ್ಬರು ಬ್ರೇಕಪ್​ ಮಾಡಿಕೊಂಡಿದ್ದಾರೆ. ಆದರೂ ಇಬ್ಬರು ಬರಬಹುದು ಎಂಬ ಕುತೂಹಲವೂ ಇದೆ. ಇದಕ್ಕೆ ಉತ್ತರ ಬಿಗ್​ಬಾಸ್​ ಆರಂಭವಾದಾಗ ಮಾತ್ರ ಸಿಗುತ್ತದೆ.

ಇನ್ನು ವರುಣ್​ ಆರಾಧ್ಯ ವಿಚಾರಕ್ಕೆ ಬಂದರೆ, ಆತನಿಗೆ ಇನ್​ಸ್ಟಾಗ್ರಾಂನಲ್ಲಿ 8 ಲಕ್ಷಕ್ಕೂ ಅಧಿಕ ಮಂದಿ ಫಾಲೋವರ್ಸ್​ ಇದ್ದಾರೆ. ಆತನ ಪ್ರೊಫೈಲ್​ ಪ್ರಕಾರ ತಾನೊಬ್ಬ ವಿಡಿಯೋ ಕ್ರಿಯೆಟರ್ ಹಾಗೂ ಕಲಾವಿದ ಎಂದು ಬರೆದುಕೊಂಡಿದ್ದಾನೆ. ಈತನು ಕೂಡ ವರ್ಷಾ ಜತೆಗೆ ಮಾಡಿದ್ದ ರೀಲ್ಸ್​ ವಿಡಿಯೋಗಳನ್ನು ಡಿಲೀಟ್​ ಮಾಡಿದ್ದಾನೆ. ಕಳೆದೊಂದು ತಿಂಗಳಿಂದ ಇಬ್ಬರು ಅಂತರ ಕಾಯ್ದುಕೊಂಡಿದ್ದು, ಫಾಲೋವರ್ಸ್​ಗಳ ಅನುಮಾನಕ್ಕೆ ವರ್ಷಾ ಕೊನೆಗೂ ತೆರೆ ಎಳೆದಿದ್ದಾರೆ.