ಸಿನಿವಾಣಿ

ದೀಪಾವಳಿ ಆಫರ್; 400 ಸಿನಿಮಾ ಕಾರ್ಮಿಕರಿಗೆ ಚಿನ್ನದ ನಾಣ್ಯ ನೀಡಿದ ತಮಿಳು ನಟ

ಚೆನ್ನೈ: ತಮಿಳು ನಟ ಸಿಂಬು ಒಂದಿಲ್ಲೊಂದು ಕಾರಣಕ್ಕೆ ಸುದ್ದಿಯಲ್ಲಿರುತ್ತಾರೆ. ಇತ್ತೀಚೆಗಷ್ಟೇ ಈಶ್ವರನ್​ ಚಿತ್ರದ ಮೂಲಕ ಕನ್ನಡಕ್ಕೂ ಆಗಮಿಸುವ ಸುಳಿವು ನೀಡಿದ್ದರು ಸಿಂಬು. ಬಳಿಕ ಅದೇ ಚಿತ್ರದ ಪೋಸ್ಟರ್ ಮೂಲಕ ವಿವಾದಕ್ಕೂ ಗುರಿಯಾಗಿದ್ದರು. ಇದೀಗ ಮೆಚ್ಚುವಂಥ ಕೆಲಸ ಮಾಡಿ ಗ್ರೇಟ್​ ಎನಿಸಿಕೊಂಡಿದ್ದಾರೆ.

ಹೌದು, ದೀಪಾವಳಿ ಪ್ರಯುಕ್ತ ಶೂಟಿಂಗ್​ ಹಂತದಲ್ಲಿರುವ ಈಶ್ವರನ್  ಚಿತ್ರದ ಕಾರ್ಮಿಕರಿಗೆ ಮತ್ತು ಜೂ. ಕಲಾವಿದರಿಗೆ ಚಿನ್ನದ ನಾಣ್ಯ ಮತ್ತು ಬಟ್ಟೆಯನ್ನು ನೀಡಿದ್ದಾರೆ. ಈಶ್ವರನ್ ಚಿತ್ರದ 400 ಮಂದಿಗೆ ತಲಾ ಒಂದು ಗ್ರಾಂನ ಚಿನ್ನದ ನಾಣ್ಯ ವಿತರಣೆ ಮಾಡಿದ್ದಾರೆ. ಇದಷ್ಟೇ ಅಲ್ಲ, ಚಿತ್ರದಲ್ಲಿನ 200ಕ್ಕೂ ಅಧಿಕ ಜೂ. ಕಲಾವಿದರಿಗೆ ಬಟ್ಟೆ ನೀಡಿದ್ದಾರೆ.

ಇನ್ನು ತಮಿಳುನಾಡಿನಲ್ಲಿ ಈ ರೀತಿಯ ಬಟ್ಟೆ ಮತ್ತು ಬಂಗಾರ ನೀಡುವುದು ಇದೇ ಮೊದಲೇನಲ್ಲ. ಈ ಹಿಂದೆ ಶಿವಾಜಿ ಗಣೇಶನ್​ ಸಹ ಇಂಥದೊಂದು ಸಂಪ್ರದಾಯವನ್ನು ಬೆಳೆಸಿಕೊಂಡು ಬಂದಿದ್ದರು. ಅದಾದ ಬಳಿಕ ರಜನಿಕಾಂತ್ ಮತ್ತು ವಿಜಯ್​ ಇದನ್ನು ಮುಂದುವರಿಸಿದ್ದರು. ಇದೀಗ ಸಿಂಬು ಸಿನಿಮಾ ಕಾರ್ಮಿಕರ ನೆರವಿಗೆ ನಿಂತಿದ್ದಾರೆ. (ಏಜೆನ್ಸೀಸ್​)