ಸಿನಿವಾಣಿ

ವರ್ಷಾಂತ್ಯಕ್ಕೆ ಸಿದ್ಧಾರ್ಥ್ ಕಿಯಾರಾ ಮದುವೆ

ಕಳೆದ ಡಿಸೆಂಬರ್​ನಲ್ಲಿ ಕತ್ರಿನಾ ಕೈಫ್ ಮತ್ತು ವಿಕ್ಕಿ ಕೌಶಲ್ ಮದುವೆಯಾಗಿದ್ದರು. ಆ ಬಳಿಕ ಈ ವರ್ಷ ರಣಬೀರ್ ಕಪೂರ್, ಆಲಿಯಾ ಭಟ್ ಮತ್ತು ಅಲಿ ಫಜಲ್, ರಿಚಾ ಛಡ್ಡಾ ಜೋಡಿ ಸಪ್ತಪದಿ ತುಳಿದಿದ್ದರು. ಅವರ ಬೆನ್ನಲ್ಲೇ ಈ ಡಿಸೆಂಬರ್​ನಲ್ಲಿ ಬಾಲಿವುಡ್​ನ ಮತ್ತೊಂದು ತಾರಾ ಜೋಡಿ ಹಸೆಮಣೆಯೇರಲು ಸಿದ್ದವಾಗಿದೆ. ಸದ್ಯ ಬಿಟೌನ್ ಅಂಗಳದಲ್ಲಿ ಹರಿದಾಡುತ್ತಿರುವ ಸುದ್ದಿಯ ಪ್ರಕಾರ ಸಿದ್ಧಾರ್ಥ್ ಮಲ್ಹೋತ್ರಾ ಮತ್ತು ಕಿಯಾರಾ ಅಡ್ವಾನಿ ವರ್ಷದಂತ್ಯಕ್ಕೆ ಮದುವೆಯಾಗಲು ತೀರ್ವನಿಸಿದ್ದು, ದಿನಾಂಕವನ್ನು ಅಂತಿಮಗೊಳಿಸಿ ಸದ್ದಿಲ್ಲದೇ ಸಿದ್ಧತೆಯಲ್ಲಿ ತೊಡಗಿದ್ದಾರಂತೆ.

ಕಳೆದ ವರ್ಷ ತೆರೆಕಂಡ ‘ಶೇರ್​ಶಾಹ್’ ಚಿತ್ರದಲ್ಲಿ ಸಿದ್ಧಾರ್ಥ್, ಕಿಯಾರಾ ಒಟ್ಟಿಗೆ ನಟಿಸಿದ್ದರು. ಚಿತ್ರದ ಸೆಟ್​ನಲ್ಲಿ ಪರಿಚಯವಾಗಿ, ಪರಿಚಯ ಗೆಳೆತನಕ್ಕೆ ತಿರುಗಿ, ಪ್ರೇಮಾಂಕುರವಾಗಲು ಹೆಚ್ಚು ಸಮಯ ಬೇಕಾಗಲಿಲ್ಲ. ಅತ್ತ ಸಿನಿಮಾ ಬಿಡುಗಡೆಯಾಗುವ ಮೊದಲೇ ಇವರ ಪ್ರೀತಿ, ಪ್ರೇಮದ ಕುರಿತು ಸುದ್ದಿಗಳು ಹರಿದಾಡತೊಡಗಿದ್ದವು. ಆ ಬಳಿಕ ಹಲವು ಕಾರ್ಯಕ್ರಮಗಳಲ್ಲಿ ಇಬ್ಬರೂ ಒಟ್ಟಿಗೆ ಕಾಣಿಸಿಕೊಂಡಿದ್ದರು. ಸದ್ಯ ಇಬ್ಬರೂ ಮದುವೆಯಾಗಲು ನಿರ್ಧರಿಸಿದ್ದು, ಇದೇ ಡಿಸೆಂಬರ್​ನಲ್ಲಿ ಮದುವೆಯಾಗಲಿದ್ದಾರಂತೆ.

ಬಳಿಕ ಮುಂಬೈನಲ್ಲಿ ಬಾಲಿವುಡ್​ನ ಗೆಳೆಯರಿಗಾಗಿ ಆರತಕ್ಷತೆ ಆಯೋಜಿಸಲಿದ್ದಾರೆ ಎನ್ನಲಾಗಿದೆ. ಇನ್ನು ಸಿನಿಮಾಗಳ ವಿಷಯಕ್ಕೆ ಬಂದರೆ ಸದ್ಯ ಸಿದ್ಧಾರ್ಥ್ ಮಲ್ಹೋತ್ರಾ, ‘ಮಿಷನ್ ಮಜ್ನೂ’ ಬಿಡುಗಡೆಗೆ ಎದುರು ನೋಡುತ್ತಿದ್ದು, ‘ಯೋಧಾ’ ಚಿತ್ರದಲ್ಲಿ ನಟಿಸುತ್ತಿದ್ದಾರೆ. ಹಾಗೆಯೇ ಕಿಯಾರಾ ಕೂಡ ‘ಗೋವಿಂದಾ ಮೇರಾ ನಾಮ್, ‘ಸತ್ಯಪ್ರೇಮ್ ಕೀ ಕಥಾ’ ಹಾಗೂ ರಾಮ್ರಣ್ ತೇಜಾ ನಾಯಕನಾಗಿರುವ 15ನೇ ಚಿತ್ರದಲ್ಲಿ ನಾಯಕಿಯಾಗಿ ಕಾಣಿಸಿಕೊಳ್ಳಲಿದ್ದಾರೆ. -ಏಜೆನ್ಸೀಸ್