ಸಿನಿವಾಣಿ

ಲೊಕೇಶನ್​ ಹುಡುಕುವವರಿಗೆ ಹೀಗೊಂದು ಪುಸ್ತಕ!

ಬಾಲಿವುಡ್​ ಚಿತ್ರ 'ಶೋಲೆ' ಚಿತ್ರೀಕರಣ ಮಾಡಿದ್ದು ಎಲ್ಲಿ?

ಮೈಸೂರಿನ ಲಲಿತ್​ ಮಹಲ್​ ಪ್ಯಾಲೇಸ್​ನಲ್ಲಿ ಯಾವ್ಯಾವ ಚಿತ್ರಗಳ ಚಿತ್ರೀಕರಣವಾಗಿದೆ?

ಕರ್ನಾಟಕದ ಕರಾವಳಿಯಲ್ಲಿ ಸೆರೆಹಿಡಿಯಲಾದ ಚಿತ್ರಗಳ್ಯಾವುವು?

ಯಾವುದೇ ಸಿನಿಮಾ ಇರಬಹುದು, ಆ ಸಿನಿಮಾದಲ್ಲಿನ ಒಂದು ಲೊಕೇಶನ್​ ಇಷ್ಟವಾದರೆ, ಅದನ್ನು ಹುಡುಕಿಕೊಂಡು ಹೋಗುವ ಜನರಿದ್ದಾರೆ. ಹೀಗೆ ಸಿನಿಮಾಗಳಿಂದಲೇ ಜನಪ್ರಿಯವಾದ ಎಷ್ಟೋ ಲೊಕೇಶನ್​ಗಳು ಕರ್ನಾಟಕದಲ್ಲಿವೆ. ಇನ್ನೊಂದು ಕಡೆ, ಇಂಥದ್ದೊಂದು ಲೊಕೇಶನ್​ ಬೇಕು ಎಂದು ಹುಡುಕಿಕೊಂಡು ಹೋಗಿ ಅಲ್ಲೇ ಚಿತ್ರೀಕರಣ ಮಾಡುವ ಮೇಕರ್​ಗಳು ನಮ್ಮಲ್ಲಿದ್ದಾರೆ. ಈ ಎರಡೂ ವಿಭಾಗದವರನ್ನು ಬೆಸೆಯುವಂತಹ ಪುಸ್ತಕವೊಂದು ಇದೀಗ ಬಿಡುಗಡೆಯಾಗಿದೆ.

ಕತೆ-ಚಿತ್ರಕಥೆ ಬರೆಯುವ ಬಗ್ಗೆ, ತಾಂತ್ರಿಕ ಅಂಶಗಳ ಬಗ್ಗೆ, ಸಿನಿಮಾದ ಬ್ಯುಸಿನೆಸ್ ಮತ್ತು ಮಾರ್ಕೆಟಿಂಗ್​​ ಬಗ್ಗೆ ... ಇದುವರೆಗೂ ಹಲವಾರು ಪುಸ್ತಕಗಳು ಬಿಡುಗಡೆಯಾಗಿವೆ. ಇದೀಗ ಚಿತ್ರೀಕರಣ ಮಾಡುವುದಕ್ಕೆ ಲೊಕೇಶನ್​ಗಳ ಹುಡುಕಾಟದಲ್ಲಿರುವವರ ಟೆನ್ಶನ್​ ಕಡಿಮೆ ಮಾಡುವುದಕ್ಕೆಂದೇ ಹೊಸದೊಂದು ಪುಸ್ತಕ ಬಿಡುಗಡೆಯಾಗಿದೆ. ಅದೇ 'ಫಿಲ್ಮಿ ಎಸ್ಕೇಪ್ಸ್​ ಇನ್​ ಕರ್ನಾಟಕ'. ಬರೆದಿರುವವರು ಶ್ರುತಿ ಇಂದಿರಾ ಲಕ್ಷ್ಮೀನಾರಾಯಣ್​.

ಶ್ರುತಿ ಸಿನಿಮಾ ಪತ್ರಕರ್ತೆಯಾಗಿ ಕೆಲಸ ಮಾಡಿದವರು. ಕೆಲವು ಸಿನಿಮಾಗಳ ಕಥೆ-ಚಿತ್ರಕಥೆ ವಿಭಾಗದಲ್ಲಿ ಕೆಲಸ ಮಾಡಿದವರು. 'ಟೋಪಿವಾಲ', 'ಶ್ರೀನಿವಾಸ ಕಲ್ಯಾಣ', 'ಬೀರಬಲ್​' ಚಿತ್ರಗಳ ನಿರ್ದೇಶಕರಾದ ಎಂ.ಜಿ. ಶ್ರೀನಿವಾಸ್​ ಅವರ ಪತ್ನಿಯಾದ ಶ್ರುತಿ, ಇದೀಗ ಕರ್ನಾಟಕ ಪ್ರವಾಸೋದ್ಯಮ ಇಲಾಖೆ ಮತ್ತು ಲೋನ್ಲಿ ಪ್ಲಾನೆಟ್​ಗಾಗಿ 'ಫಿಲ್ಮಿ ಎಸ್ಕೇಪ್ಸ್​ ಇನ್​ ಕರ್ನಾಟಕ' ಎಂಬ ಪುಸ್ತಕ ಬರೆದಿದ್ದಾರೆ.

ಈ ಪುಸ್ತಕದಲ್ಲಿ ಅವರು ಕನಾರ್ಟಕದ ಪ್ರಸಿದ್ಧವಾದ ತಾಣಗಳು, ಆ ತಾಣದ ವಿಶೇಷತೆಗಳು, ಅಲ್ಲಿ ಚಿತ್ರೀಕರಣವಾದ ಚಿತ್ರಗಳು, ಆ ಚಿತ್ರದ ಹೆಗ್ಗಳಿಕೆಗಳು ... ಇವೆಲ್ಲವನ್ನೂ ಹಿಡಿದಿಟ್ಟಿದ್ದಾರೆ. ಉದಾಹರಣೆಗೆ, ಮೈಸೂರಿನ ಸುತ್ತಮುತ್ತ ಯಾವೆಲ್ಲಾ ಅದ್ಭುತವಾದ ಲೊಕೇಶನ್​ಗಳಿವೆ, ಅಲ್ಲಿ ಯಾವೆಲ್ಲಾ ಚಿತ್ರಗಳ ಚಿತ್ರೀಕರಣವಾಗಿದೆ. ಆ ಚಿತ್ರದ ವಿಶೇಷತೆಗಳೇನು, ಆ ತಾಣದ ವಿಶೇಷ ಖಾದ್ಯಗಳೇನು, ಆ ತಾಣದ ವಿಶೇಷತೆಗಳೇನು ಮುಂತಾದ ಹಲವು ವಿಷಯಗಳ ಬಗ್ಗೆ ಬೆಳಕು ಚೆಲ್ಲಲಾಗಿದೆ.

ಶಿವರಾಜಕುಮಾರ್​ ಅವರು ಮುನ್ನುಡಿ ಬರೆದಿರುವ ಈ ಪುಸ್ತಕ ಮಾರಾಟಕ್ಕಿಲ್ಲ ಎಂಬುದು ಗೊತ್ತಿರಲಿ. ಪ್ರವಾಸೋದ್ಯಮ ಇಲಾಖೆಯ ವೆಬ್​ಸೈಟ್​ನಲ್ಲಿ ಈ 65 ಪುಟಕಗಳ ಹೊತ್ತಿಗೆ ಲಭ್ಯವಿದ್ದು, ಅಲ್ಲಿಂದ ಡೌನ್​ಲೋಡ್​ ಮಾಡಿಕೊಳ್ಳಬಹುದಾಗಿದೆ.