ಶ್ರುತಿ ಹಾಸನ್, ತಮಿಳು ಮತ್ತು ತೆಲುಗು ಚಿತ್ರರಂಗಗಳಲ್ಲಿ ಅದೆಷ್ಟು ಗುರುತಿಸಿಕೊಂಡಿದ್ದಾರೋ ಬಾಲಿವುಡ್ನಲ್ಲೂ ಅಷ್ಟೇ ಹೆಸರು ಮಾಡಿದ್ದಾರೆ. ಹಾಗೆ ನೋಡಿದರೆ, ಅವರು ಚಿತ್ರರಂಗಕ್ಕೆ ಎಂಟ್ರಿ ಕೊಟ್ಟಿದ್ದೇ 2009ರಲ್ಲಿ ಬಿಡುಗಡೆಯಾದ ಹಿಂದಿ ಚಿತ್ರ ‘ಲಕ್’ನಿಂದ. ಆ ನಂತರ ಹಲವು ಚಿತ್ರಗಳಲ್ಲಿ ನಟಿಸಿದರಾದರೂ, ನಾಲ್ಕು ವರ್ಷಗಳ ಹಿಂದೆ ಬಿಡುಗಡೆಯಾದ ‘ಬೆಹನ್ ಹೋಗಿ ತೇರಿ’ ನಂತರ ಯಾವೊಂದು ಚಿತ್ರದಲ್ಲೂ ನಟಿಸಿರಲಿಲ್ಲ. ಈಗ ಒಂದು ಗ್ಯಾಪ್ನ ನಂತರ ಅವರು ಆರ್. ಬಾಲ್ಕಿ ನಿರ್ದೇಶನದ ಹೊಸ ಹಿಂದಿ ಚಿತ್ರದಲ್ಲಿ ನಟಿಸುತ್ತಿದ್ದಾರೆ. ವಿಶೇಷ ಇರೋದು ಆ ವಿಷಯದಲ್ಲಲ್ಲ. ಈ ಚಿತ್ರದಲ್ಲಿ ಸನ್ನಿ ಡಿಯೋಲ್ ಮಗಳಾಗಿ ಶ್ರುತಿ ನಟಿಸುತ್ತಿದ್ದಾರಂತೆ!
ಲಾಕ್ಡೌನ್ ಸಮಯದಲ್ಲಿ ಬಾಲ್ಕಿ ಎರಡು ಚಿತ್ರಗಳನ್ನು ಪ್ಲಾನ್ ಮಾಡಿದ್ದು, ಆ ಪೈಕಿ ಈಗಾಗಲೇ ಒಂದು ಶುರು ಆಗಿದೆ. ಸನ್ನಿ ಡಿಯೋಲ್, ದುಲ್ಕರ್ ಸಲ್ಮಾನ್, ಪೂಜಾ ಭಟ್ ಮುಂತಾದವರು ನಟಿಸುತ್ತಿರುವ ಈ ಚಿತ್ರ ಮುಗಿಯುತ್ತಿದ್ದಂತೆಯೇ ಬಾಲ್ಕಿ ಇನ್ನೊಂದು ಚಿತ್ರ ಶುರು ಮಾಡಲಿದ್ದಾರಂತೆ. ಆ ಚಿತ್ರದಲ್ಲೂ ಸನ್ನಿ ಡಿಯೋಲ್ ಮುಂದುವರಿಯಲಿದ್ದು, ಅವರ ಮಗಳಾಗಿ ಶ್ರುತಿ ಹಾಸನ್ ಚಿತ್ರತಂಡ ಸೇರಿಕೊಳ್ಳಲಿದ್ದಾರೆ. ಸನ್ನಿ ಡಿಯೋಲ್ಗೆ ನಾಯಕಿಯಾಗಿ ರೇವತಿ ನಟಿಸುತ್ತಿದ್ದು, ಮಧ್ಯವಯಸ್ಕ ಗಂಡ-ಹೆಂಡತಿ ಕಾರಣಾಂತರಗಳಿಂದ ದೂರಾದಾಗ, ಮಗಳು ಹೇಗೆ ಅವರಿಬ್ಬರನ್ನು ಒಂದು ಮಾಡುತ್ತಾಳೆ ಎನ್ನುವುದು ಚಿತ್ರದ ಕಥೆಯಂತೆ. - ಏಜೆನ್ಸೀಸ್