ಬೆಂಗಳೂರು: ‘5ಡಿ’ ಎಂಬ ಚಿತ್ರವನ್ನು ಈ ವರ್ಷದ ಆರಂಭದಲ್ಲಿ ಎಸ್. ನಾರಾಯಣ್ ಶುರು ಮಾಡಿದ್ದು ನೆನಪಿರಬಹುದು. ಆದಿತ್ಯ, ಅದಿತಿ ಪ್ರಭುದೇವ ನಾಯಕ-ನಾಯಕಿಯಾಗಿ ನಟಿಸಿರುವ ಈ ಚಿತ್ರದ ಚಿತ್ರೀಕರಣ ಸದ್ದಿಲ್ಲದೆ ಮುಗಿದಿದೆ. ಚಿತ್ರ ಮುಗಿದ ಖುಷಿಯನ್ನು ನಾರಾಯಣ್, ಇತ್ತೀಚೆಗೆ ಪತ್ರಿಕಾಗೋಷ್ಠಿಯೊಂದರಲ್ಲಿ ಹಂಚಿಕೊಂಡಿದ್ದಾರೆ. ಚಿತ್ರಕ್ಕೆ ದುಡಿದ ಕಲಾವಿದರು ಮತ್ತು ತಂತ್ರಜ್ಞರನ್ನು ವೇದಿಕೆಗೆ ಕರೆದು, ಎಲ್ಲರ ಬಗ್ಗೆ ನಾಲ್ಕು ಮಾತುಗಳನ್ನಾಡಿದ್ದಾರೆ. ಅದರಲ್ಲೂ ಅದಿತಿ ಪ್ರಭುದೇವ ಬಗ್ಗೆ ಒಂದು ಔನ್ಸ್ ಜಾಸ್ತಿಯೇ ಹೇಳಿದ್ದಾರೆ.
‘ಅದಿತಿ ಅಚಾನಕ್ ಆಗಿ ಈ ಸಿನಿಮಾದ ನಾಯಕಿಯಾದರು. ಎರಡು ನಿಮಿಷಗಳ ಗ್ಯಾಪ್ನಲ್ಲಿ ಅವರು ಚಿತ್ರತಂಡ ಸೇರಿಕೊಂಡರು. ಅವರೆಷ್ಟು ಸೈಲೆಂಟ್ ಎಂದರೆ, ಅವರು ಬರುವುದೂ ಹೋಗುವುದೂ ಗೊತ್ತಾಗುತ್ತಿರಲಿಲ್ಲ. ಇನ್ನು, ಅವರು ಸಂಭಾವನೆ ಸಹ ಕೇಳಿದವರಲ್ಲ. ನಾನೇ ಅವರ ತಂದೆಯನ್ನು ಕರೆದು, ‘ನಿಮಗೆ ಸಂಭಾವನೆ ಬೇಡವೇ?’ ಎಂದರೆ, ಕೊಟ್ಟರೆ ಓಕೆ ಎನ್ನುತ್ತಿದ್ದರು. ಯಾವ ವಿಚಾರದಲ್ಲೂ ರಗಳೆ ಇಲ್ಲ. ಅವರನ್ನು ನೋಡಿ, ಡಾ. ರಾಜಕುಮಾರ್ ಹೇಳುತ್ತಿದ್ದ ಮಾತು ನೆನಪಾಯಿತು. ನೋಡೋರ ಕಣ್ಣಿಗೆ ಸ್ಟಾರ್ ತರಹ ಇರಬೇಕು. ಆದರೆ, ಸ್ಟಾರ್ ಆಗಿ ಬದುಕಬಾರದು ಎಂದು ಅವರು ಹೇಳುತ್ತಿದ್ದರು’ ಎಂದು ನೆನೆದರು ನಾರಾಯಣ್.
ಆದಿತ್ಯ ಚಿತ್ರತಂಡಕ್ಕೆ ಸೇರ್ಪಡೆಯಾಗುವುದಕ್ಕೆ ಮುನ್ನ, ಬೇರೆ ಇನ್ನಿಬ್ಬರು ಹೀರೋಗಳ ಜತೆಗೆ ಈ ಸಿನಿಮಾ ಸಂಬಂಧ ಚರ್ಚೆ ಆಗಿತ್ತಂತೆ. ಅಲ್ಲಿ ನಿರ್ದೇಶಕರಿಗೆ ಬೇರೆಯದೇ ಅನುಭವಗಳಾದವು. ಕೊನೆಗೆ ಆದಿತ್ಯ ಅವರನ್ನು ಸಂರ್ಪಸಿದಾಗ, ಅವರು ಕಥೆ, ನಿರ್ವಪಕರು, ಸಂಭಾವನೆ ಯಾವುದೂ ಕೇಳದೆ ಒಪ್ಪಿಕೊಂಡು ನಟಿಸಿದ್ದಾರೆ ಎಂಬುದು ನಾರಾಯಣ್ ಮಾತು. ‘5ಡಿ’ ಚಿತ್ರವನ್ನು ಸ್ವಾತಿ ಕುಮಾರ್ ನಿರ್ವಿುಸಿದ್ದಾರೆ.