ಸಿನಿವಾಣಿ

'ಕಬ್ಜ'ದಲ್ಲಿ ಉಪೇಂದ್ರ, ಸುದೀಪ್​ ಜತೆಗೆ ಶಿವಣ್ಣ

ಬೆಂಗಳೂರು: ಉಪೇಂದ್ರ ಅಭಿನಯದ 'ಕಬ್ಜ' ಚಿತ್ರದಲ್ಲಿ ಶಿವರಾಜಕುಮಾರ್​ ನಟಿಸಿದ್ದಾರೆ ಎಂಬ ಸುದ್ದಿ ಇದ್ದೇ ಇತ್ತು. ಆದರೆ, ಚಿತ್ರದ ನಿರ್ಮಾಪಕ ಮತ್ತು ನಿರ್ದೇಶಕ ಆರ್​. ಚಂದ್ರು, ಈ ವಿಷಯವನ್ನು ಸ್ಪಷ್ಟಪಡಿಸಿರಲಿಲ್ಲ. ಈಗ ಚಿತ್ರ ಬಿಡುಗಡೆಗೆ ಇನ್ನೆರಡು ವಾರಗಳು ಇವೆ ಎನ್ನುವಾಗ, ಚಿತ್ರದಲ್ಲಿ ಶಿವರಾಜಕುಮಾರ್​ ನಟಿಸಿದ್ದಾರೆ ಎಂಬ ಸುದ್ದಿಯನ್ನು ಸ್ವತಃ ಚಿತ್ರತಂಡವೇ ಖಚಿತಪಡಿಸಿದೆ.

ಶುಕ್ರವಾರ ಚಿತ್ರತಂಡದವರು ಒಂದು ವಿಶೇಷ ಪೋಸ್ಟರ್​ ಬಿಡುಗಡೆ ಮಾಡಿದ್ದು, ಪೋಸ್ಟರ್​ನಲ್ಲಿ ಶಿವರಾಜಕುಮಾರ್​ ಸಹ ಇದ್ದಾರೆ. ಉಪೇಂದ್ರ, ಸುದೀಪ್ ಹಾಗೂ ಶಿವರಾಜಕುಮಾರ್ ಮೂವರು ನಟರನ್ನು ಒಂದೇ ಚಿತ್ರದಲ್ಲಿ ನೋಡುತ್ತಿರುವುದು ಅಭಿಮಾನಿಗಳ ಪಾಲಿಗಂತೂ ದೊಡ್ಡ ಹಬ್ಬವೇ ಸರಿ.

ಇನ್ನು, ಮಾರ್ಚ್ 4ರ ಶನಿವಾರ ಸಂಜೆ 5 ಗಂಟೆ 2 ನಿಮಿಷಕ್ಕೆ 'ಕಬ್ಜ' ಚಿತ್ರದ ಎಲ್ಲಾ ಭಾಷೆಗಳ ಟ್ರೇಲರ್ ಆನಂದ್ ಆಡಿಯೋ ಯೂಟ್ಯೂಬ್ ಚಾನಲ್​ನಲ್ಲಿ ಬಿಡುಗಡೆಯಾಗಲಿದೆ.

ಶ್ರೀ ಸಿದ್ದೇಶ್ವರ ಎಂಟರ್ ಪ್ರೈಸಸ್ ಲಾಂಛನದಲ್ಲಿ ನಿರ್ಮಾಣವಾಗಿರುವ, ಆರ್ ಚಂದ್ರು ನಿರ್ದೇಶನದ 'ಕಬ್ಜ' ಚಿತ್ರದಲ್ಲಿ ಉಪೇಂದ್ರ ಜತೆಗೆ ಸುದೀಪ್​ ಶ್ರೇಯಾ ಶರಣ್​, ಮುಕೇಶ್​ ಶರ್ಮ, ನವಾಬ್​ ಷಾ, ಅನೂಪ್​ ರೇವಣ್ಣ ಸೇರಿದಂತೆ ಹಲವರರು ಅಭಿನಯಿಸಿದ್ದಾರೆ. ಚಿತ್ರಕ್ಕೆ ರವಿ ಬಸ್ರೂರು ಅವರ ಸಂಗೀತ ಮತ್ತು ಎ.ಜೆ. ಶೆಟ್ಟಿ ಅವರ ಛಾಯಾಗ್ರಹಣವಿದೆ. 'ಕಬ್ಜ' ಚಿತ್ರವು ಮಾರ್ಚ್ 17 ರಂದು ವಿಶ್ವದಾದ್ಯಂತ ತೆರೆ‌ ಕಾಣಲಿದೆ.