ಬೆಂಗಳೂರು: 'ಟಗರು' ಚಿತ್ರದ ನಂತರ ಶಿವರಾಜ್ಕುಮಾರ್ ಮತ್ತು 'ಡಾಲಿ' ಧನಂಜಯ್ ಜತೆಯಾಗಿ ಅಭಿನಯಿಸುತ್ತಿರುವ ಇನ್ನೊಂದು ಚಿತ್ರ ಇಂದು ಪ್ರಾರಂಭವಾಗುತ್ತದೆ ಎಂದು ಹೇಳಲಾಗಿತ್ತು. ಅದರಂತೆ ಚಿತ್ರವು ಇಂದು ಪ್ರಾರಂಭವಾಗಿದೆ.
ಇದು ಶಿವರಾಜಕುಮಾರ್ ಅಭಿನಯದ 123ನೇ ಚಿತ್ರವಾಗಿದ್ದು, ಈ ಚಿತ್ರಕ್ಕೆ ಹೆಸರೇನು ಇಡಬಹುದು ಎಂಬ ಕುತೂಹಲ ಎಲ್ಲರಲ್ಲೂ ಇತ್ತು. ಈ ಪ್ರಶ್ನೆಗೆ ಶಿವರಾಜಕುಮಾರ್ ಅವರೇ ಉತ್ತರ ಕೊಟ್ಟಿದ್ದು, ಚಿತ್ರಕ್ಕೆ 'ಶಿವಪ್ಪ' ಎಂಬ ಹೆಸರನ್ನು ಇಡಲಾಗಿದೆ.
'ಶಿವಪ್ಪ' ಚಿತ್ರವನ್ನು ತಮಿಳಿನ ಖ್ಯಾತ ಛಾಯಾಗ್ರಾಹಕ ವಿಜಯ್ ಮಿಲ್ಟನ್ ನಿರ್ದೇಶನ ಮಾಡುತ್ತಿದ್ದಾರೆ. ಕನ್ನಡದಲ್ಲಿ ಇದವರ ಮೂರನೆಯ ಚಿತ್ರವಾಗಿದ್ದು, ಇದಕ್ಕೂ ಮುನ್ನ ಅವರು 'ಅಟ್ಟಹಾಸ' ಮತ್ತು 'ಪೊಗರು' ಚಿತ್ರಗಳಿಗೆ ಛಾಯಾಗ್ರಹಣ ಮಾಡಿದ್ದರು. ಇದೀಗ ಈ ಚಿತ್ರದ ಮೂಲಕ ಅವರು ಕನ್ನಡದಲ್ಲಿ ನಿರ್ದೇಶಕರಾಗಿದ್ದಾರೆ.
'ಶಿವಪ್ಪ' ಕುರಿತು ಮಾತನಾಡುವ ಶಿವರಾಜಕುಮಾರ್, 'ಇದು ನನ್ನ ಚಿತ್ರ ಎನ್ನುವುದಕ್ಕಿಂತ ವಿಜಯ್ ಮಿಲ್ಟನ್ ಅವರ ಚಿತ್ರ ಎಂದು ಹೇಳುವುದು ಸರಿಯಾಗುತ್ತದೆ. ಈ ಚಿತ್ರದಲ್ಲಿ ನನಗೊಂದು ಒಳ್ಳೆಯ ಪಾತ್ರವಿದೆ. ಇದೊಂದು ಮನರಂಜನೆಯ ಚಿತ್ರವಾಗಿದ್ದು ಒಂದೊಳ್ಳೆಯ ಸಂದೇಶವೂ ಇದೆ. ತಪ್ಪು ಅಂತ ಗೊತ್ತಿದ್ದರೂ, ತಪ್ಪು ಮಾಡೋಕೆ ಹೋಗಬಾರದು ಎಂಬ ಸಂದೇಶವು ಈ ಚಿತ್ರದಲ್ಲಿದ್ದು, ನನ್ನದು ಒಂದರ್ಥದಲ್ಲಿ ಮುಗ್ಧ ಮತ್ತು ರಗೆಡ್ ಪಾತ್ರವಿದೆ' ಎನ್ನುತ್ತಾರೆ.
ಇನ್ನು 'ಟಗರು' ಚಿತ್ರಕ್ಕೂ ಈ ಚಿತ್ರಕ್ಕೂ ಯಾವುದೇ ಸಂಬಂಧವಿಲ್ಲ ಎನ್ನುವ ಅವರು, 'ಎರಡೂ ಚಿತ್ರಗಳಿಗೆ ಯಾವುದೇ ಸಂಬಂಧವಿಲ್ಲ ಮತ್ತು ಇಲ್ಲಿ ಧನಂಜಯ್ ವಿಲನ್ ಸಹ ಅಲ್ಲ . ಇಲ್ಲಿ ಚಿತ್ರಕಥೆ ವಿಭಿನ್ನವಾಗಿದ್ದು, ಕಥೆ ಏನಿರಬಹುದು ಎಂದು ಊಹಿಸುವುದು ಕಷ್ಟ' ಎನ್ನುತ್ತಾರೆ ಅವರು.
ಸದ್ಯಕ್ಕೆ ಚಿತ್ರಕ್ಕೆ 'ಶಿವಪ್ಪ' ಎಂಬ ಹೆಸರಿಡಲಾಗಿದ್ದು, ಟ್ಯಾಗ್ಲೈನ್ ಇನ್ನಷ್ಟೇ ಇಡಬೇಕಿದೆ.