ಸಿನಿವಾಣಿ

ಶಿವಣ್ಣ, ದರ್ಶನ್, ಧ್ರುವ ಸರ್ಜಾ... ಜೈಲಿನಿಂದ ಹೊರಬರುತ್ತಿದ್ದಂತೆ ಸ್ಫೋಟಕ ಹೇಳಿಕೆ ನೀಡಿದ ಮಡೆನೂರು ಮನು! Madenuru Manu

Madenuru Manu : ಸಹನಟಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದ ಮೇಲೆ ಬಂಧನವಾಗಿ ಪರಪ್ಪನ ಅಗ್ರಹಾರ ಜೈಲು ಪಾಲಾಗಿದ್ದ ನಟ ಹಾಗೂ ಕಾಮಿಡಿ ಕಿಲಾಡಿಗಳು ಖ್ಯಾತಿಯ ಮಡೆನೂರು ಮನು ಜಾಮೀನಿನ ಮೇಲೆ ಇಂದು (ಜೂನ್​ 07) ಬಿಡುಗಡೆಯಾಗಿದ್ದಾರೆ. ಜೈಲಿನಿಂದ ಹೊರಬರುತ್ತಿದ್ದಂತೆ ತನ್ನ ವಿರುದ್ಧದ ಆರೋಪಿಗಳಿಗೆ ಮನು ಸ್ಪಷ್ಟನೆ ಸಹ ನೀಡಿದ್ದಾರೆ.

ಪರಪ್ಪನ ಅಗ್ರಹಾರ ಜೈಲಿನ ಮುಂದೆ ಸುದ್ದಿಗಾರರೊಂದಿಗೆ ಮಾತನಾಡಿದ ಮಡೆನೂರು ಮನು, ಶಿವಣ್ಣ, ದರ್ಶನ್ ಮತ್ತು ಧ್ರುವ ಸರ್ಜಾ ಬಗ್ಗೆ ಮಾತನಾಡಿರುವ ಆಡಿಯೋ ನನ್ನದಲ್ಲ. ನಾನು ಮೂವರ ಬಗ್ಗೆಯೂ ಮಾತನಾಡಿಲ್ಲ. ನಾನು ಮೊದಲು ದೊಡ್ಡವರನ್ನು (ಶಿವಣ್ಣ) ಭೇಟಿ ಮಾಡಿ, ಸತ್ಯವನ್ನು ವಿವರಿಸಿ ಕ್ಷಮೆ ಕೇಳುತ್ತೇನೆ ಎಂದರು.

ನನ್ನ ಮೂರು ವರ್ಷಗಳ ಶ್ರಮವನ್ನು ಹಾಳು ಮಾಡಿದರು. ಐದಾರು ಮಂದಿ ಪಕ್ಕಾ ಪ್ಲಾನ್ ಮಾಡಿ ನನ್ನನ್ನು ಮುಗಿಸಿದರು. ಸಾಕಷ್ಟು ಅಡೆತಡೆಗಳ ನಡುವೆ ಸಿನಿಮಾ ರಿಲೀಸ್ ಆಯ್ತು. ನನ್ನ ವಿರುದ್ಧ ಪ್ರತಿ ಹಂತದಲ್ಲಿಯು ಷಡ್ಯಂತ್ರ ನಡೆಯಿತು. ಸಿನಿಮಾ ರಿಲೀಸ್​ಗು ಮೊದಲು ಕುಣಿಗಲ್ ಬಳಿ ಮೊಟ್ಟೆ ಹೊಡೆದರು. ನನ್ನ ಮೇಲೆ ಹಲ್ಲೆ ನಡೆಸಿ ಬಟ್ಟೆಗಳನ್ನು ಹರಿದರು. ಕೊನೆಗೆ ನನ್ನ ಜೊತೆಯಲ್ಲಿದ್ದವರೇ ಕೇಸ್ ಮಾಡಿಸಿದರು ಎಂದು ಮನು ಆರೋಪಿಸಿದರು.

ಮೊದಲು ರೇಪ್ ಕೇಸ್​ನಲ್ಲಿ ತಪ್ಪಿಸಿಕೊಂಡಾಗ, 50 ಸಾವಿರ ಖರ್ಚು ಮಾಡಿ ಆಡಿಯೋ ರೆಡಿ ಮಾಡಿದರು. ನಿನ್ನ ಕತೆ ಮುಗಿಸುವುದಾಗಿ ಧಮ್ಕಿ ಹಾಕಿದರು. ಸಾಮಾನ್ಯ ಹಳ್ಳಿಹೈದ ಮೂರು ವರ್ಷ ಹಗಲಿರುಳು ಕಷ್ಟಪಟ್ಟಿದ್ದೆ. ಆದರೆ, ಎಲ್ಲವನ್ನೂ ಮುಗಿಸಿದರು. ಆದರೆ, ಕಲೆ ತಾಯಿ ಶಾರದೆ ನನ್ನ ಕೈ ಬಿಡುವುದಿಲ್ಲ ಎಂದು ಮಡೆನೂರು ಮನು ಹೇಳಿದರು.

ನಾನು ಬಡವ. ಆಡಿಯೋ ನನ್ನದಲ್ಲ ಎಂದು ಚಾಲೆಂಜ್‌ ಮಾಡಲು ಆಗಲ್ಲ. ಉಳಿದಂತೆ ಅತ್ಯಾಚಾರ ಕೇಸ್ ವಿರುದ್ಧ ಕಾನೂನು ಹೋರಾಟ ಮಾಡುತ್ತೇನೆ. ನನಗೆ ನ್ಯಾಯಾಲಯದ ಮೇಲೆ ನಂಬಿಕೆ ಇದೆ ಎಂದು ಮಡೆನೂರು ಮನು ತಿಳಿಸಿದ್ದಾರೆ.

ಏನಿದು ಪ್ರಕರಣ?

ತನಗೆ ಬಲವಂತದಿಂದ ಎಣ್ಣೆ ಕುಡಿಸಿ, ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಅಲ್ಲದೆ, ವಿಡಿಯೋ ರೆಕಾರ್ಡ್​ ಕೂಡ ಮಾಡಿಕೊಂಡಿದ್ದಾನೆ ಎಂದು ಆರೋಪಿಸಿ ಮಡೆನೂರು ಮನು ವಿರುದ್ಧ ಸಹನಟಿ ಗಂಭೀರ ಆರೋಪ ಮಾಡಿದ್ದು, ಎಫ್​ಐಆರ್​ ದಾಖಲಿಸಿದ ಅನ್ನಪೂರ್ಣೇಶ್ವರಿ ನಗರ ಠಾಣಾ ಪೊಲೀಸರು ಮನುರನ್ನು ಬಂಧಿಸಿದರು. ತಮ್ಮ ನಟನೆಯ ಕುಲದಲ್ಲಿ ಕೀಳ್ಯಾವುದೋ ಸಿನಿಮಾ ಬಿಡುಗಡೆಗೂ ಮುನ್ನವೇ ಮನು ಬಂಧನವಾಯಿತು. ಸುಮಾರು 10 ದಿನಗಳಿಗೂ ಹೆಚ್ಚು ಕಾಲ ಜೈಲಿನಲ್ಲಿದ್ದ ಮನು, ಜಾಮೀನಿನ ಮೇಲೆ ಇಂದು ಬಿಡುಗಡೆಯಾಗಿದ್ದಾರೆ.

ವೈರಲ್​ ಆಡಿಯೋದಲ್ಲಿ ಏನಿತ್ತು?

ಮನು ಅವರು ಕನ್ನಡ ಚಿತ್ರರಂಗದ ಸ್ಟಾರ್​ ನಟರ ವಿರುದ್ಧ ನಾಲಿಗೆ ಹರಿಬಿಟ್ಟಿದ್ದರು. ನಟ ಶಿವರಾಜ್​ಕುಮಾರ್​ ಇನ್ನು ಐದಾರು ವರ್ಷ ಬದುಕಿದರೆ ಹೆಚ್ಚು, ಆನಂತರ ಅವರು ಸತ್ತು ಹೋಗುತ್ತಾರೆ. ನಟ ದರ್ಶನ್​ ಅಂತೂ ಈಗಾಗಲೇ ಸತ್ತು ಹೋಗಿದ್ದಾನೆ. ಇನ್ನು ನಾಲ್ಕು ವರ್ಷ ಆತನಿಗೆ ಕ್ರೇಜ್​ ಇದ್ರೆ ಅದೇ ಹೆಚ್ಚು. ಶೀಘ್ರದಲ್ಲೇ ಅವನ ಕ್ರೇಜ್​ ಕಡಿಮೆಯಾಗಲಿದೆ. ಇನ್ನು ನಟ ಧ್ರುವ ಸರ್ಜಾ ಹೆಚ್ಚೆಂದರೆ 8 ವರ್ಷ ಮಾತ್ರ ಆತನ ಮಾರ್ಕೆಟ್​ ಇರಲಿದೆ. ಆಮೇಲೆ ಮಾರ್ಕೆಟ್​ ಬಿದ್ದು ಹೋಗಲಿದೆ. ಈ ಮೂರು ಮಂದಿಯ ನಡುವೆ ಕಾಂಪಿಟೇಶನ್ ಕೊಡಲು ನಿಂತಿರುವ ಗಂಡು ಗಲಿ ಕಣ್ರಿ ನಾನು ಎಂದು ಕುಡಿದ ಅಮಲಿನಲ್ಲಿ ನಾಲಿಗೆ ಹರಿಬಿಟ್ಟಿದ್ದರು.

ಆಡಿಯೋದಲ್ಲಿರುವುದು ಮಡೆನೂರು ಮನು ಅವರ ಧ್ವನಿಯೇ ಎಂಬುದು ಖಚಿತವಾಗಿಲ್ಲ. ಆದರೆ, ಸದ್ಯದ ವಿವಾದದ ನಡುವೆ ಈ ಆಡಿಯೋ ಭಾರಿ ಸಂಚಲನ ಮೂಡಿಸಿತ್ತು. ಆಡಿಯೋ ಕೇಳಿದ ಬಹುತೇಕ ಮಂದಿ ಇದು ಮನು ಅವರದ್ದೇ ಧ್ವನಿ ಎಂದರು. ಯಾವುದೂ ಎಣ್ಣೆ ಪಾರ್ಟಿಯ ಸಮಯದಲ್ಲಿ ಕಂಠಪೂರ್ತಿ ಕುಡಿದು ಈ ರೀತಿ ಅಹಂಕಾರದಿಂದ ಮಾತನಾಡಿದ್ದಾನೆ. ಆ ಸಂದರ್ಭದಲ್ಲಿ ಆತನ ಸ್ನೇಹಿತರೇ ಆಡಿಯೋ ರೆಕಾರ್ಡ್​ ಮಾಡಿ, ವಿವಾದದ ನಡುವೆ ಹರಿಬಿಟ್ಟಿದ್ದಾರೆ ಎಂದು ಮಾತನಾಡಿಕೊಂಡರು. ನಟ ಜಗ್ಗೇಶ್​ ಕೂಡ ಮನು ವಿರುದ್ಧ ಆಕ್ರೋಶ ಹೊರಹಾಕಿದ್ದರು. ಕನ್ನಡ ಚಿತ್ರರಂಗ ವಾಣಿಜ್ಯ ಮಂಡಳಿಯಲ್ಲೂ ಈ ಬಗ್ಗೆ ಪ್ರಸ್ತಾಪವಾಗಿತ್ತು. ಈ ಎಲ್ಲ ಬೆಳವಣಿಗೆ ನಡುವೆ ಇದೀಗ ಜೈಲಿನಿಂದ ವಾಪಸ್​ ಬಂದಿರುವ ಮಡೆನೂರು ತನ್ನ ಆರೋಪಗಳಿಗೆ ಸ್ಪಷ್ಟನೆ ನೀಡಿದ್ದಾರೆ. (ಏಜೆನ್ಸೀಸ್​)