ಸರ್ಕಾರ ಮತ್ತು ಸಂಘ ಸಂಸ್ಥೆಗಳೆಲ್ಲವೂ ಈಗ ಜಾಗೃತಿ ಕಾರ್ಯದಲ್ಲಿ ತೊಡಗಿಸಿಕೊಂಡಿವೆ. ಸಾಮಾಜಿಕ ಅಂತರ ಕಾಯ್ದುಕೊಳ್ಳುವಿಕೆ ಬಗ್ಗೆ ನಿತ್ಯ ಒಂದಲ್ಲ ಒಂದು ರೀತಿ ಪ್ರಯೋಗಗಳನ್ನು ಮಾಡುತ್ತಿವೆ. ಈಗ ಶಾರುಖ್ ಖಾನ್ ಚಿತ್ರದ ಡೈಲಾಗ್ಗೂ ಸಾಮಾಜಿಕ ಅಂತರಕ್ಕೂ ಹೊಸ ಟ್ವಿಸ್ಟ್ ಕೊಟ್ಟಿದ್ದಾರೆ ಮಹಾರಾಷ್ಟ್ರದ ನಾಗ್ಪುರ ಪೊಲೀಸರು.
"ಡೋಂಟ್ ಅಂಡರ್ಎಸ್ಟಿಮೇಟ್ ದಿ ಪವರ್ ಆಫ್ ಕಾಮನ್ ಮ್ಯಾನ್..' ಇದು ರೋಹಿತ್ ಶೆಟ್ಟಿ ನಿರ್ದೇಶನದ ಶಾರುಖ್ ಖಾನ್ ಮತ್ತು ದೀಪಿಕಾ ಪಡುಕೋಣೆ ಮುಖ್ಯಭೂಮಿಕೆ ನಿಭಾಯಿಸಿರುವ "ಚೆನ್ನೈ ಎಕ್ಸ್ಪ್ರೆಸ್' ಚಿತ್ರದ ಡೈಲಾಗ್. ಇದೇ ಡೈಲಾಗ್ ಅನ್ನು ಬಳಸಿಕೊಂಡು, ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ನಾಗ್ಪುರ ಖಾಕಿ ಪಡೆ ಹೇಳಿಕೊಂಡಿದೆ. "ಡೋಂಟ್ ಅಂಡರ್ಎಸ್ಟಿಮೇಟ್ ದಿ ಪವರ್ ಆಫ್ ಸೋಷಿಯಲ್ ಡಿಸ್ಟೆನ್ಸಿಂಗ್' ಎಂಬುದನ್ನು ಅಧಿಕೃತ ಟ್ವಿಟರ್ ಪುಟದಲ್ಲಿ ಹಂಚಿಕೊಂಡಿದೆ. ಅಷ್ಟೇ ಅಲ್ಲ ಶಾರುಖ್ ಮತ್ತು ದೀಪಿಕಾ ದೂರ ದೂರ ಕುಳಿತ ಫೋಟೋ ಸಹ ಸಾಮಾಜಿಕ ಅಂತರದ ಬಗ್ಗೆ ಮನವರಿಕೆ ಮಾಡಿಕೊಡುತ್ತಿದೆ. ಹೀಗೆ ಶೇರ್ ಮಾಡಿಕೊಂಡಿದ್ದೇ ತಡ, ಜಾಲತಾಣದಲ್ಲಿ ಈ ಪೋಸ್ಟ್ ಸಖತ್ ವೈರಲ್ ಆಗುತ್ತಿದೆ. (ಏಜೆನ್ಸೀಸ್)