ಬೆಂಗಳೂರು: ಶರಣ್ ನಟನಾಗಿಯಷ್ಟೇ ಅಲ್ಲ, ಗಾಯಕನಾಗಿಯೂ ಜನಪ್ರಿಯ. ಈಗಾಗಲೇ ಕೆಲವು ಜನಪ್ರಿಯ ಹಾಡುಗಳನ್ನು ಹಾಡಿರುವ ಶರಣ್, ಈಗ ಬಹಳ ದಿನಗಳ ನಂತರ 'ಜಸ್ಟ್ ಪಾಸ್' ಚಿತ್ರದ ಹಾಡೊಂದಕ್ಕೆ ಧ್ವನಿಯಾಗಿದ್ದಾರೆ.
ಸದ್ಯ ಕೆ.ಎಂ.ರಘು ನಿರ್ದೇಶನದ 'ಜಸ್ಟ್ ಪಾಸ್' ಚಿತ್ರಕ್ಕಾಗಿ ವಿ.ನಾಗೇಂದ್ರ ಪ್ರಸಾದ್ ಬರೆದಿರುವ 'ಎಕ್ಸ್ ಕ್ಯೂಸ್ ಮಿ ಕೇಳಿ ನನ್ನ ಲೆಕ್ಚರು. ಜಸ್ಟ್ ಪಾಸ್ ಆಗೋದಿಲ್ಲ ನಿಮ್ಮ ಫ್ಯೂಚರು ...' ಎಂಬ ಹಾಡನ್ನು ಶರಣ್ ಹಾಡಿದ್ದಾರೆ. ಹರ್ಷವರ್ಧನ್ ರಾಜ್ ಸಂಗೀತ ಸಂಯೋಜಿಸಿರುವ ಈ ಹಾಡಿನಲ್ಲಿ ಸಾಧು ಕೋಕಿಲ ನಟಿಸಿದ್ದಾರೆ.
ರಾಯ್ಸ್ ಎಂಟರ್ ಟೈನ್ಮೆಂಟ್ ಲಾಂಛನದಲ್ಲಿ ಕೆ.ವಿ.ಶಶಿಧರ್ ನಿರ್ಮಿಸುತ್ತಿರುವ ಈ ಚಿತ್ರಕ್ಕೆ ನಿರ್ದೇಶಕ ಕೆ.ಎಂ.ರಘು ಅವರೆ ಕಥೆ, ಚಿತ್ರಕಥೆ ಬರೆದಿದ್ದಾರೆ. ಸುಜಯ್ ಕುಮಾರ್ ಈ ಚಿತ್ರದ ಛಾಯಾಗ್ರಾಹಕರು.
'ಜಸ್ಟ್ ಪಾಸ್' ಆಗುವ ವಿದ್ಯಾರ್ಥಿಗಳ ಕುರಿತಾದ ಈ ಚಿತ್ರದಲ್ಲಿ ಶ್ರೀ ಮಹದೇವ್ ನಾಯಕನಾಗಿ ಅಭಿನಯಿಸಿದರೆ, ಪ್ರಣತಿ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಸಾಧು ಕೋಕಿಲ, ರಂಗಾಯಣ ರಘು, ಸುಚೇಂದ್ರ ಪ್ರಸಾದ್, ದೀಪಕ್ ರೈ (ಕಾಂತಾರ), ಪ್ರಕಾಶ್ ತುಮ್ಮಿನಾಡು, ಗೋವಿಂದೇಗೌಡ ಮುಂತಾದವರು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.