ಆಸ್ಟ್ರೇಲಿಯಾದ ಖ್ಯಾತ ವಿಕೆಟ್ ಕೀಪರ್ ಶೇನ್ ವಾರ್ನ್ ಅವರು ನೆನ್ನೆ ಅಂದರೆ ಮಾರ್ಚ್ 5 ರಂದು ಹಠಾತ್ತನೆ ಹೃದಯಾಘಾತದಿಂದ ನಿಧನ ಹೊಂದಿದ್ದಾರೆ. 52 ವರ್ಷದ ಕ್ರಿಕೆಟಿಗ ಶೇನ್ ವಾರ್ನ್ ಆಸ್ಟ್ರೇಲಿಯಾದವರು ಆದರೂ ಭಾರತ ಕ್ರಿಕೆಟ್ ಪ್ರೇಮಿಗಳಿಗೂ ಅವರು ಬಹಳ ಹತ್ತಿರವಾಗಿದ್ದರು. ಹೌದು, ಶೇನ್ ವಾರ್ನ್ ಅವರು ತಮ್ಮ ನಿವೃತ್ತಿಯ ನಂತರ ಕಮೆಂಟೇಟರ್ ಆಗಿ, ಇನ್ನು ಭಾರತದ ಐಪಿಎಲ್‌ನಲ್ಲಿ ರಾಜಸ್ಥಾನ ರಾಯಲ್ಸ್ ತಂಡದ ಮೆಂಟರ್ ಆಗಿ ಸಹ ಕೆಲಸ ಮಾಡಿದ್ದರಿಂದ ಭಾರತೀಯರಿಗೆ ವಾರ್ನ್ ಮೇಲೆ ತುಂಬಾನೆ ಪ್ರೀತಿ. ಮತ್ತೊಂದೆಡೆ, ಶೇನ್ ವಾರ್ನ್ ಕೂಡಾ ಭಾರತ ದೇಶದ ಮೇಲೆ ಅವರಿಗೆ ಇರುವ ಪ್ರೀತಿಯನ್ನು ಹಲವಾರು ಸಂದರ್ಶನಗಳಲ್ಲಿ ಹಂಚಿಕೊಂಡಿದ್ದರು.
ಅಂತಹ ಉತ್ತಮ ಕ್ರಿಕೆಟಿಗ ಶೇನ್ ವಾರ್ನ್ ಇನ್ನು ನೆನಪು ಮಾತ್ರ ಅಂದರೆ ಭಾರತದ ಕ್ರಿಕೆಟ್ ಕ್ರೀಡಾ ಅಭಿಮಾನಿಗಳಿಗೆ ಅರಗಿಸಿಕೊಳ್ಳಲಾಗದ ಸತ್ಯವಾಗಿದೆ. ಇದೀಗ, ಅವರ ನಿಧನದ ನಂತರ ಒಂದು ಸುದ್ದಿ ಎಲ್ಲೆಡೆ ಹರಿದಾಡುತ್ತಿದೆ. ಹೌದು, ಶೇನ್ ವಾರ್ನ್ಗೆ ಬಾಲಿವುಡ್ನ ಒಂದು ಸಿನಿಮಾ ಅವಕಾಶವನ್ನು ನೀಡಲಾಗಿತ್ತಂತೆ. ಈ ಬಗ್ಗೆ ಸ್ವತಃ ಕ್ರಿಕೆಟಿಗ ಶೇನ್ ವಾರ್ನ್ ಅವರೇ ಈ ಹಿಂದೆ ಮಾಧ್ಯಮಗಳ ಮುಂದೆ ಹೇಳಿಕೊಂಡಿದ್ದರು. ಆದರೆ, ಆ ಸಿನಿಮಾ ಯೋಜನೆ ಸೆಟ್ಟೇರಲಿಲ್ಲವಾದ್ದರಿಂದ ಶೇನ್ ವಾರ್ನ್ ಭಾರತದ ಬಾಲಿವುಡ್ ಸಿನಿಮಾದಲ್ಲಿ ನಟಿಸಲು ಸಾಧ್ಯವಾಗಿಲ್ಲ. ಅಂದಹಾಗೆ, ಶೇನ್ ವಾರ್ನ್ ಅವರ ಜೀವನ ಕಥೆಯನ್ನು ಸಿನಿಮಾ ಮಾಡುವ ಬಗ್ಗೆಯೂ ಯೋಜನೆ ಮಾಡಲಾಗಿತ್ತು. ಈ ಬಗ್ಗೆ ಮಾತಾಡಿದ ಶೇನ್ ವಾರ್ನ್ ಆಗ, ''ಅದೊಂದು ಹಾಲಿವುಡ್ ಸಿನಿಮಾ, ಆದರೆ ಭಾರತೀಯರಿಗಾಗಿ ಮಾಡಲಾಗುತ್ತಿರುವ ಹಾಲಿವುಡ್ ಸಿನಿಮಾ ಇದು'' ಎಂದು ಹೇಳಿಕೊಂಡಿದ್ದರು.
ಇನ್ನು, ತಮ್ಮ ಜೀವನ ಆಧರಿಸಿದ ಆ ಸಿನಿಮಾದಲ್ಲಿ ತಮ್ಮ ಪಾತ್ರದಲ್ಲಿ ಬ್ರಾಡ್ ಫಿಟ್ ಅಥವಾ ಲಿಯೋನಾರ್ಡೊ ಡಿಕಾಪ್ರಿಯೊ ನಟಿಸಬೇಕು ಎಂಬ ಆಸೆಯೂ ಶೇನ್ ವಾರ್ನ್ಗಿತ್ತು. ಶೇನ್ ವಾರ್ನ್ ಸಹ ತಮ್ಮ ಜೀವನದಲ್ಲಿ ಸಾಕಷ್ಟು ನೋವು ಅನುಭವಿಸಿದ್ದಾರೆ. ಕ್ರಿಕೆಟ್, ಜೂಜು, ಮಾದಕ ವ್ಯಸನ, ಪರಸ್ತ್ರೀಯರ ಸಹವಾಸ, ವಿಶ್ವ ದಾಖಲೆ ಅಂತ ಹೀಗೆ ಹಲವು ಏರಿಳಿತಗಳನ್ನು ಶೇನ್ ವಾರ್ನ್ ತಮ್ಮ ಜೀವನದಲ್ಲಿ ನೋಡಿದ್ದಾರೆ. ಹೀಗಾಗಿ, ಅವರ ಜೀವನ ಕಥೆಯನ್ನು ಒಂದು ಸಿನಿಮಾ ಮಾಡುವ ಯೋಜನೆಯಿತ್ತು. ಆದರೆ, ಕೋವಿಡ್ ಕಾರಣದಿಂದಾಗಿ ಆ ಯೋಜನೆಗೆ ತಡವಾಯಿತು. ಆದರೆ, ಸದ್ಯ ಶೇನ್ ವಾರ್ನ್ ಅವರೇ ಜೀವಂತವಿಲ್ಲ. ಹೀಗಾಗಿ, ಅವರಿಗೆ ಸಿನಿಮಾ ಎಂಬ ಕನಸು ನನಸಾಗಿಲ್ಲ ಎಂದೇ ಹೇಳಬೇಕು.