ಬೆಂಗಳೂರು: ಅಘನ್ಯ ಪಿಕ್ಚರ್ಸ್ ಲಾಂಛನದಲ್ಲಿ ವರ್ತೂರ್ ಮಂಜು ನಿರ್ಮಿಸುತ್ತಿರುವ 'ಶಂಭೋ ಶಿವ ಶಂಕರ' ಚಿತ್ರದ ಮೊದಲ ಹಂತದ ಚಿತ್ರೀಕರಣ ಮುಕ್ತಾಯವಾಗಿದೆ. ಬೆಂಗಳೂರು ಸುತ್ತಮುತ್ತ ಹತ್ತು ದಿನಗಳ ಕಾಲ ಚಿತ್ರೀಕರಣ ನಡೆದಿದೆ. ನಾಯಕರಾದ ಅಭಯ್ ಪುನೀತ್, ರೋಹಿತ್, ರಕ್ಷಕ್, ನಾಯಕಿ ಸೋನಾಲ್ ಮೊಂತೆರೋ ಹಾಗೂ ಜೋಗಿ ನಾಗರಾಜ್ ಈ ಭಾಗದ ಚಿತ್ರೀಕರಣದಲ್ಲಿ ಭಾಗವಹಿಸಿದ್ದರು.
ಇದನ್ನೂ ಓದಿ: ಸ್ಯಾಂಡಲ್ವುಡ್ಗೆ ಮತ್ತೆ ಪ್ರಭುದೇವ
ನವೆಂಬರ್ ೧ ರಿಂದ ದ್ವಿತೀಯ ಹಂತದ ಚಿತ್ರೀಕರಣ ಆರಂಭವಾಗಲಿದೆ. ಮಾತಿನ ಭಾಗದೊಂದಿಗೆ ಹಾಡು ಹಾಗೂ ಸಾಹಸ ಸನ್ನಿವೇಶದ ಚಿತ್ರೀಕರಣ ದ್ವಿತೀಯ ಹಂತದಲ್ಲಿ ನಡೆಯಲಿದೆ. ಕಿರುತೆರೆಯಲ್ಲಿ ಹಲವು ಯಶಸ್ವಿ ಧಾರಾವಾಹಿಗಳನ್ನು ನಿರ್ದೇಶಿಸಿರುವ ಶಂಕರ್ ಕೋನಮಾನಹಳ್ಳಿ ಈ ಚಿತ್ರದ ನಿರ್ದೇಶಕರು. ಬೆಳ್ಳಿತೆರೆಯಲ್ಲಿ ಶಂಕರ್ ಕೋನಮಾನಹಳ್ಳಿ ಅವರಿಗೆ ಇದು ಮೊದಲ ಚಿತ್ರ.
ಕಥೆ, ಚಿತ್ರಕಥೆ, ಸಂಭಾಷಣೆ ಕೂಡ ಶಂಕರ್ ಕೋನಮಾನಹಳ್ಳಿ ಅವರದೇ. ಗೌಸ್ ಫೀರ್ ಹಾಗೂ ಹಿತನ್ ಹಾಸನ್ ಹಾಡುಗಳನ್ನು ಬರೆದಿದ್ದು, ಹಿತನ್ ಹಾಸನ್ ಸಂಗೀತ ನೀಡುತ್ತಿದ್ದಾರೆ. ನಟರಾಜ್ ಮುದ್ದಾಲ ಛಾಯಾಗ್ರಹಣ, ಕಲೈ ನೃತ್ಯ ನಿರ್ದೇಶನ, ವೆಂಕಟೇಶ್ ಯುಡಿವಿ ಸಂಕಲನ ಹಾಗೂ ಅಲ್ಟಿಮೆಟ್ ಶಿವು ಸಾಹಸ ನಿರ್ದೇಶನ ಈ ಚಿತ್ರಕ್ಕಿದೆ.
'ಶಂಭೋ ಶಿವ ಶಂಕರ' ಮೂರು ನಾಯಕ ಪಾತ್ರಗಳ ಹೆಸರಾಗಿದ್ದು, ಅಭಯ್ ಪುನೀತ್, ರೋಹಿತ್ ಹಾಗೂ ರಕ್ಷಕ್ ಈ ಮೂರು ಪಾತ್ರಗಳಲ್ಲಿ ಕಾಣಿಸಿಕೊಳುತ್ತಿದ್ದಾರೆ. ಈಗಾಗಲೇ ಕನ್ನಡದ ಹಲವು ಚಿತ್ರಗಳಲ್ಲಿ ಕಾಣಿಸಿಕೊಂಡಿರುವ ಸೋನಾಲ್ ಮೊಂತೆರೋ ಈ ಚಿತ್ರದ ನಾಯಕಿ.