ಸಿನಿವಾಣಿ

ಶಾರೂಖ್​ ದಿನಕ್ಕೆ ಎಷ್ಟು ಬಾರಿ ಕಾಫಿ ಕುಡಿಯುತ್ತಾರೆ ಹೇಳಿ ನೋಡೋಣ?

ಮುಂಬೈ: ಬಾಲಿವುಡ್​ನಲ್ಲಿ 'ಕಿಂಗ್​ ಖಾನ್​' ಎಂದೇ ಹೆಸರು ಮಾಡಿದವರು ಶಾರೂಖ್​ ಖಾನ್​. ಅವರು ಏನು ಮಾಡಿದರೂ ಬಹಳ ದೊಡ್ಡದಾಗಿಯೇ ಮಾಡುತ್ತಾರೆ ಎಂಬ ಮಾತಿದೆ. ಅದೇ ರೀತಿ ಕಾಫಿ ಕುಡಿಯುವುದರಲ್ಲೂ ಇಡೀ ಬಾಲಿವುಡ್​ನಲ್ಲೇ ನಂಬರ್​ ಒನ್​ ಎಂದು ಹೇಳಲಾಗುತ್ತದೆ.

ಶಾರೂಖ್​ ಖಾನ್​ ಹಿಂದೊಮ್ಮೆ ಸಂದರ್ಶನವೊಂದರಲ್ಲಿ ಹೇಳಿಕೊಂಡಂತೆ ಅವರಿಗೆ ನಿದ್ದೆ ಬಹಳ ಕಡಿಮೆಯಂತೆ. ನಿದ್ದೆ ಮಾಡಿದರೂ ರಾತ್ರಿ ತಡವಾಗಿ ಮಲಗಿ, ಬೆಳಿಗ್ಗೆ ತಡವಾಗಿ ಏಳುತ್ತಾರಂತೆ. ಅದೇ ಕಾರಣಕ್ಕೆ, ತಾನು ಅಕ್ಷಯ್​ ಕುಮಾರ್​ ಜತೆಗೆ ನಟಿಸುವುದಕ್ಕೆ ಈ ಜನುಮದಲ್ಲಿ ಸಾಧ್ಯವಿಲ್ಲ ಎಂದು ಶಾರೂಖ್​ ಹೇಳಿಕೊಂಡಿದ್ದರು. ಏಕೆಂದರೆ, ಅಕ್ಷಯ್​ ಬೆಳಿಗ್ಗೆ 4ಕ್ಕೆ ಎದ್ದು, ರಾತ್ರಿ 9ಕ್ಕೆ ಮಲಗುತ್ತಾರೆ. ಆದರೆ, ಶಾರೂಖ್​ ಬೆಳಿಗ್ಗೆ ನಾಲ್ಕಕ್ಕೆ ಮಲಗಿ, ಮಧ್ಯಾಹ್ನ 12ಕ್ಕೆ ಏಳುತ್ತಾರೆ ಎಂಬ ಮಾತಿದೆ.

ಅದರಿಲಿ, ಬೆಳಗ್ಗಿನ ಜಾವದವರೆಗೂ ಶಾರೂಖ್​ ಎದ್ದಿರುವುದು ಹೇಗೆ ಮತ್ತು ಅಲ್ಲಿಯವರೆಗೂ ಕೆಲಸ ಮಾಡುತ್ತಿರುವುದು ಹೇಗೆ ಎಂಬ ಪ್ರಶ್ನೆಗೆ ಕಾಫಿ ಎಂಬ ಉತ್ತರ ಅವರಿಂದ ಬರುತ್ತದೆ. ಶಾರೂಖ್​ ಬ್ಲಾಕ್​ ಕಾಫಿ ಪ್ರಿಯರಂತೆ ಮತ್ತು ದಿನಕ್ಕೆ ಏನಿಲ್ಲವೆಂದರೂ 30 ಬಾರಿ ಕಾಫಿ ಕುಡಿಯುತ್ತಾರಂತೆ. ಹಾಗಾಗಿಯೇ ಅವರಿಗೆ ನಿದ್ದೆ ಕಡಿಮೆ ಎಂದು ಹೇಳಲಾಗುತ್ತದೆ.

ಈ ಕುರಿತು ಸಂದರ್ಶನವೊಂದರಲ್ಲಿ ಮಾತನಾಡಿರುವ ಅವರು, 'ನಾನು ಹೆಚ್ಚು ನೀರು ಕುಡಿಯುವುದಿಲ್ಲ. ಬದಲಿಗೆ ಕಾಫಿ ಕುಡಿಯುತ್ತೇನೆ. ಅದೆಷ್ಟರ ಮಟ್ಟಿಗೆ ಎಂದರೆ, ದಿನಕ್ಕೆ 30 ಗ್ಲಾಸ್​ ಕಾಫಿ ಕುಡಿಯುತ್ತೇನೆ. ಎಲ್ಲಿ ಹೋದರೂ ಒಂದು ಮೆಷೀನ್​ ತೆಗೆದುಕೊಂಡೇ ಹೋಗುತ್ತೇನೆ. ಬೇಕಾದಾಗ ಬಟನ್​ ಒತ್ತಿದರೆ ಕಾಫಿ ಸಿಗುತ್ತದೆ. ಒಮ್ಮೊಮ್ಮೆ ಮರೆತು, ಕಾಫಿ ಇಲ್ಲದೆ ಸಾಕಷ್ಟು ಕಷ್ಟಪಟ್ಟಿದ್ದೇನೆ' ಎಂದು ಅವರು ಹೇಳಿಕೊಂಡಿದ್ದಾರೆ.