ಸಿನಿವಾಣಿ

'ಸ್ಲಂಡಾಗ್​' ಚಿತ್ರದಿಂದ 'ಕಿಂಗ್​' ಖಾನ್​ ಹೊರಬಂದಿದ್ದೇಕೆ?

ಕೆಲವು ವರ್ಷಗಳ ಹಿಂದೆ ಭಾರತದಲ್ಲಿ ಸಂಚಲನ ಮೂಡಿಸಿದ ಚಿತ್ರವೆಂದರೆ ಅದು 'ಸ್ಲಂಡಾಗ್​ ಮಿಲಿಯನೇರ್​'. ಈ ಚಿತ್ರವು ಆಸ್ಕರ್​ ಪ್ರಶಸ್ತಿ ಪಡೆಯುವುದರ ದೊಡ್ಡ ಹೆಸರು ಮಾಡುವುದರ ಜತೆಗೆ, ಆ ಚಿತ್ರದಲ್ಲಿ ನಟಿಸಿದ ದೇವ್​ ಪಟೇಲ್​ ಮತ್ತು ಫ್ರೀಡಾ ಪಿಂಟೋ ಅವರಿಗೆ ಸಾಕಷ್ಟು ಹೆಸರು ತಂದುಕೊಟ್ಟಿತು. ಅಷ್ಟೇ ಅಲ್ಲ, ಈ ಚಿತ್ರದ ನಂತರ ನಟ ಅನಿಲ್​ ಕಪೂರ್​, ಹಾಲಿವುಡ್​ನಲ್ಲೂ ಜನಪ್ರಿಯರಾಗಿ, ಅಲ್ಲೂ ಚಿತ್ರಗಳಲ್ಲಿ ನಟಿಸಿಬಂದರು.

ಆದರೆ, ಅನಿಲ್​ ಕಪೂರ್​ಗೂ ಮುನ್ನ ಆ ಪಾತ್ರವನ್ನು ಶಾರೂಖ್​ ಖಾನ್​ ಮಾಡಬೇಕಾಗಿತ್ತು ಎಂಬ ವಿಷಯ ಗೊತ್ತಿದೆಯಾ? ಗೊತ್ತಿಲ್ಲದಿದ್ದರೆ ಇಲ್ಲಿ ಕೇಳಿ. ಆ ಪಾತ್ರವನ್ನು ಶಾರೂಖ್​ ಖಾನ್​ ಅವರಿಂದ ಮಾಡಿಸಬೇಕು ಎಂಬುದು ನಿರ್ದೇಶಕ ಡ್ಯಾನಿ ಬಾಯ್ಲ್​ ಅವರ ಆಸೆಯಾಗಿತ್ತಂತೆ. ಶಾರೂಖ್​ ಅವರನ್ನು ಭೇಟಿ ಮಾಡಿ, ಚಿತ್ರದಲ್ಲಿ ನಟಿಸುವ ಆಫರ್ ಕೊಟ್ಟರಂತೆ. ಆದರೆ, ಶಾರೂಖ್​ ಅದಕ್ಕೆ ಒಪ್ಪಿಲ್ಲ.

ಇಷ್ಟಕ್ಕೂ ಶಾರೂಖ್​ ಯಾಕೆ, ಅಂಥದ್ದೊಂದು ಅವಕಾಶವನ್ನು ಕೈಬಿಟ್ಟರು ಎಂಬ ಪ್ರಶ್ನೆ ಬರುವುದು ಸಹಜ. ಈ ಕುರಿತು ಸಂದರ್ಶನವೊಂದರಲ್ಲಿ ಮಾತನಾಡಿರುವ ಅವರು, 'ಡ್ಯಾನಿ ನನಗೆ ಬಹಳ ಒಳ್ಳೆಯ ಗೆಳೆಯ. ಆದರೂ ಅವರ ಚಿತ್ರದಲ್ಲಿ ನಾನು ನಟಿಸಲಿಲ್ಲ ಎಂದರೆ ಅದಕ್ಕೆ ಕಾರಣವಿದೆ. ಪ್ರಮುಖವಾಗಿ ಅದೊಂದು ನೆಗೆಟಿವ್​ ಪಾತ್ರ. ನಾನು ಅಷ್ಟರಲ್ಲಾಗಲೇ 'ಕೌನ್​ ಬನೇಗಾ ಕರೋಡ್​ಪತಿ' ಕಾರ್ಯಕ್ರಮವನ್ನು ನಡೆಸಿಕೊಟ್ಟಿದ್ದೆ. ಈ ಚಿತ್ರದಲ್ಲಿನ ಕಾರ್ಯಕ್ರಮ ಕೆಬಿಸಿಯನ್ನೇ ಹೋಲುವುದರಿಂದ, ನಾನು ನಿಜಜೀವನದಲ್ಲೂ ಅದೇ ರೀತಿ ಮೋಸ ಮಾಡುತ್ತಿದ್ದೇನೆ ಎಂದನಿಸಬಾರದು. ಅದೇ ಕಾರಣಕ್ಕೆ ನಾನು ಆ ಚಿತ್ರದಲ್ಲಿ ನಟಿಸುವುದಕ್ಕೆ ಒಪ್ಪಿಕೊಂಡಿಲ್ಲ' ಎಂದು ಹೇಳಿಕೊಂಡಿದ್ದಾರೆ. 'ಕಿಂಗ್​ ಖಾನ್​' ಎಂದೇ ಜನಪ್ರಿಯರಾಗಿರುವ ಶಾರೂಖ್​ ಖಾನ್​.

ಯಾವಾಗ ಶಾರೂಖ್​ ಖಾನ್​ ಅವರು ಆ ಪಾತ್ರ ಮಾಡುವುದಕ್ಕೆ ನಿರಾಕರಿಸಿದರೋ, ಬೇರೆ ದಾರಿ ಇಲ್ಲದೆ, ನಿರ್ದೇಶಕ ಡ್ಯಾನಿ ಬಾಯ್ಲ್​ ಅವರು ಬೇರೊಬ್ಬ ನಟನ ಹುಡುಕಾಟ ಶುರು ಮಾಡಿದರು. ಹಾಗೆ ಹುಡುಕಾಟದಲ್ಲಿದ್ದಾಗ, ಅವರಿಗೆ ಸಿಕ್ಕವರು ಅನಿಲ್​ ಕಪೂರ್​. ಈ ಪಾತ್ರವನ್ನು ಒಪ್ಪಿಕೊಂಡಿದ್ದಷ್ಟೇ ಅಲ್ಲ, ಅದಕ್ಕೆ ನ್ಯಾಯ ಕೂಡಾ ಸಲ್ಲಿಸಿದರು ಅನಿಲ್​ ಕಪೂರ್​.

ಅಂಥದ್ದೊಂದು ಮಹತ್ವದ ಚಿತ್ರ ಮತ್ತು ಪಾತ್ರವನ್ನು ಕೈಬಿಟ್ಟಿದ್ದಿಕ್ಕೆ ಶಾರೂಖ್​ ಅವರಿಗೆ ಬೇಸರವೇನೂ ಇಲ್ಲ. ಈ ಕುರಿತು ಮಾತನಾಡಿರುವ ಅವರು, 'ಅದೊಂದು ಅದ್ಭುತ ಚಿತ್ರ. ಅನಿಲ್​ ಸಹ ಅದ್ಭುತವಾಗಿ ನಟಿಸಿದ್ದಾರೆ ಮತ್ತು ಆ ಪಾತ್ರಕ್ಕೆ ನ್ಯಾಯ ಸಲ್ಲಿಸಿದ್ದಾರೆ' ಎಂದು ಶಾರೂಖ್​ ಖಾನ್​ ಅಭಿಪ್ರಾಯಪಟ್ಟಿದ್ದಾರೆ.