ಮುಂಬೈ: ಬಾಲಿವುಡ್ನ 'ಕಿಂಗ್ ಖಾನ್' ಶಾರೂಖ್ ಖಾನ್ ಇದುವರೆಗೂ ಹಲವು ತರಹದ ಸಿನಿಮಾಗಳನ್ನು ಮಾಡಿದ್ದಾರೆ. ಆದರೆ, ಔಟ್ ಅಂಡ್ ಔಟ್ ಆಕ್ಷನ್ ಚಿತ್ರಗಳನ್ನು ಮಾಡಿರಲಿಲ್ಲ. ಈಗ 'ಪಠಾಣ್' ಚಿತ್ರದ ಊಲಕ ತಮ್ಮ ಆಸೆ ಈಡೇರಿಸಿಕೊಂಡಿರುವುದಷ್ಟೇ ಅಲ್ಲ, ಮುಂದಿನ ದಿನಗಳಲ್ಲಿ 'ಮಿಷನ್ ಇಂಪಾಸಿಬಲ್' ತರಹದ ಹೆವಿ ವೋಲ್ಟೇಜ್ ಆಕ್ಷನ್ ಚಿತ್ರಗಳಲ್ಲಿ ನಟಿಸುವುದಕ್ಕೆ ಆಸೆ ವ್ಯಕ್ತಪಡಿಸಿದ್ದಾರೆ.
ಸೌದಿ ಆರೇಬಿಯಾದಲ್ಲಿ ನಡೆಯುತ್ತಿರುವ ರೆಡ್ ಸೀ ಫೆಸ್ಟಿವಲ್ನಲ್ಲಿ ಆಯೋಜಿಸಲಾಗಿದ್ದ 'ದಿಲ್ವಾಲೆ ದುಲ್ಹನಿಯಾ ಲೇ ಜಾಯೇಂಗೇ' ಚಿತ್ರದ ವಿಶೇಷ ಪ್ರದರ್ಶನದಲ್ಲಿ ಭಾಗವಹಿಸಿ ಶಾರೂಖ್ ಮಾತಾಡುತ್ತಿದ್ದರು. ತಮಗೆ ಆಕ್ಷನ್ ಚಿತ್ರಗಳಲ್ಲಿ ನಟಿಸುವ ಆಸೆ ಇದೆ ಎಂದು ಹೇಳಿಕೊಂಡರು.
'ನಾನು ಜೀವನದಲ್ಲಿ ಆಕ್ಷನ್ ಚಿತ್ರಗಳನ್ನೇ ಮಾಡಿಲ್ಲ. ಸಾಕಷ್ಟು ಪ್ರೇಮಮಕಥೆಗಳು, ಸಾಮಾಜಿಕ ಕಥೆಗಳಲ್ಲಿ ಕಾಣಿಸಿಕೊಂಡಿದ್ದೇನೆ. ನೆಗೆಟಿವ್ ಪಾತ್ರಗಳನ್ನು ಮಾಡಿದ್ದೇನೆ. ಆದರೆ, ಆಕ್ಷನ್ ಚಿತ್ರಗಳನ್ನು ಮಾಡಿಲ್ಲ. ಅದ್ಯಾಕೋ ಏನೋ, ನನ್ನನ್ನು ಆಕ್ಷನ್ ಚಿತ್ರಗಳಿಗೆ ಯಾರೂ ಪರಿಗಣಿಸಲೇ ಇಲ್ಲ' ಎಂದು ಶಾರೂಖ್ ಖಾನ್ ಹೇಳಿಕೊಂಡಿದ್ದಾರೆ.
ಆಕ್ಷನ್ ಚಿತ್ರಗಳಲ್ಲಿ ನಟಿಸುವುದು ಶಾರೂಖ್ ಅವರ 30 ವರ್ಷಗಳ ಕನಸಂತೆ. 'ನನಗೆ ಸಾಹಸ ದೃಶ್ಯಗಳಲ್ಲಿ ಕಾಣಿಸಿಕೊಳ್ಳುವುದಕ್ಕೆ ಬಹಳ ಇಷ್ಟ. ಮುಂಬೈಗೆ ಬಂದಾಗ ಆಕ್ಷನ್ ಚಿತ್ರಗಳಲ್ಲಿ ನಟಿಸುವ ಆಸೆ ಇತ್ತು. ಆದರೆ, ಈ ಆಸೆ ಇದುವರೆಗೂ ಈಡೇರಿಲ್ಲ. 'ಪಠಾಣ್' ಚಿತ್ರದ ಮೂಲಕ ನನ್ನ ಆಸೆ ಈಡೇರಿದೆ' ಎಂದು ಶಾರೂಖ್ ಖಾನ್ ಹೇಳಿದ್ದಾರೆ.
ಮುಂದಿನ ದಿನಗಳಲ್ಲಿ ಇನ್ನಷ್ಟು ಆಕ್ಷನ್ ಚಿತ್ರಗಳಲ್ಲಿ ನಟಿಸುವಾಸೆ ಇದೆ ಎಂದು ಹೇಳಿಕೊಂಡಿರುವ ಅವರು, 'ನನಗೀಗ 57 ವರ್ಷ. ಮುಂದಿನ ದಿನಗಳಲ್ಲಿ ಇನ್ನಷ್ಟು ಆಕ್ಷನ್ ಚಿತ್ರಗಳನ್ನು ಮಾಡುವಾಸೆ. ಅದರಲ್ಲೂ 'ಮಿಷನ್ ಇಂಪಾಸಿಬಲ್' ತರಹದ ಚಿತ್ರಗಳಲ್ಲಿ ನಟಿಸುವಾಸೆ' ಎಂದು ಶಾರೂಖ್ ತಮ್ಮಾಸೆ ಹೇಳಿಕೊಂಡಿದ್ದಾರೆ.