ಮುಂಬೈ: 'ಪಠಾಣ್' ಚಿತ್ರ ಅಷ್ಟೊಂದು ದೊಡ್ಡ ಮಟ್ಟಕ್ಕೆ ಹಿಟ್ ಆಗುವುದರಲ್ಲಿ ಶಾರುಖ್ ಖಾನ್ ಜತೆಗೆ ಸಲ್ಮಾನ್ ಖಾನ್ ಅವರ ಪಾತ್ರವೂ ದೊಡ್ಡದಿದೆ. ಈ ಚಿತ್ರದಲ್ಲಿ ಅತಿಥಿ ಪಾತ್ರದಲ್ಲಿ ನಟಿಸಿದ್ದ ಸಲ್ಮಾನ್, ಚಿತ್ರದ ಗೆಲುವಿನಲ್ಲಿ ಮಹತ್ತರ ಪಾತ್ರ ವಹಿಸಿದ್ದರು. ದುಷ್ಟರ ವಿರುದ್ಧ ಶಾರುಖ್ ಮತ್ತು ಸಲ್ಮಾನ್ ತೊಡೆ ತಟ್ಟಿ ನಿಲ್ಲುವುದನ್ನು ನೋಡಿ ಫುಲ್ ಖುಷಿಯಾಗಿದ್ದ ಅಭಿಮಾನಿಗಳು, ಅವರಿಬ್ಬರೂ ಒಂದು ಚಿತ್ರದಲ್ಲಿ ಪೂರ್ಣಪ್ರಮಾಣದಲ್ಲಿ ನಟಿಸಿದರೆ ಎಷ್ಟು ಚೆನ್ನ ಎಂದು ಆಸೆಪಟ್ಟಿದ್ದರು.
ಆ ಆಸೆ ಇದೀಗ ಕೈಗೂಡುವ ಸಾಧ್ಯತೆ ಇದೆ. 'ಪಠಾಣ್' ಚಿತ್ರವನ್ನು ನಿರ್ಮಿಸಿದ್ದ ಆದಿತ್ಯ ಚೋಪ್ರಾ, ಇದೀಗ ಶಾರುಖ್ ಮತ್ತು ಸಲ್ಮಾನ್ ಅಭಿನಯದಲ್ಲಿ ಚಿತ್ರವೊಂದನ್ನು ಘೋಷಿಸಿದ್ದಾರೆ. ಹೆಸರು 'ಟೈಗರ್ ವರ್ಸಸ್ ಪಠಾಣ್'. ಈ ಚಿತ್ರದಲ್ಲಿ ಸಲ್ಮಾನ್ ಮತ್ತು ಶಾರುಖ್ ಇಬ್ಬರೂ ಏಜೆಂಟ್ ಟೈಗರ್ ಮತ್ತು ಪಠಾಣ್ ಆಗಿ ಕಾಣಿಸಿಕೊಳ್ಳುತ್ತಿದ್ದು, ಸಿದ್ಧಾರ್ಥ್ ಆನಂದ್ ನಿರ್ದೇಶನ ಮಾಡುತ್ತಿದ್ದಾರೆ.
ಈ ಚಿತ್ರ ಯಾವಾಗ ಪ್ರಾರಂಭವಾಗುತ್ತದೋ ಗೊತ್ತಿಲ್ಲ. ಆದರೆ, ಇದು ಬಾಲಿವುಡ್ನ ಅತ್ಯಂತ ದೊಡ್ಡ ಬಜೆಟ್ನ ಚಿತ್ರವಾಗಲಿದೆ ಎಂಬ ಮಾತು ಈಗಲೇ ಕೇಳಿಬರುತ್ತಿದೆ. ಅದಕ್ಕೆ ಕಾರಣವೂ ಇದೆ, ಸಲ್ಮಾನ್ ಮತ್ತು ಶಾರುಖ್ ಅವರ ಸಂಭಾವನೆಯನ್ನು ಹೊರತುಪಡಿಸಿ, ಈ ಚಿತ್ರಕ್ಕೆ 300 ಕೋಟಿ ರೂ.ಗಳ ಬಜೆಟ್ ಮೀಸಲಿಡಲಾಗಿದೆಯಂತೆ. ಇನ್ನು, ಇಬ್ಬರು ಸ್ಟಾರ್ ನಟರ ಸಂಭಾವನೆಯೂ ಸೇರಿದರೆ, ಚಿತ್ರದ ಬಜೆಟ್ 500-600 ಕೋಟಿ ರೂ. ದಾಟಲಿದೆ.
ಆದಿತ್ಯ ಚೋಪ್ರಾ ಈ ಚಿತ್ರದ ಮೇಲೆ ಅಷ್ಟೊಂದು ಹಣ ಸುರಿಯುತ್ತಿರುವುದಕ್ಕೂ ಕಾರಣವಿದೆ. 'ಪಠಾಣ್' ಚಿತ್ರವು ಬಾಕ್ಸ್-ಆಫೀಸ್ನಲ್ಲಿ 1000 ಕೋಟಿ ರೂ. ಗಳಿಕೆ ಮಾಡಿತ್ತು. ಇನ್ನು, ಸ್ಯಾಟಿಲೈಟ್ ಮತ್ತು ಡಿಜಿಟಲ್ ಹಕ್ಕುಗಳಿಂದಲೂ ದೊಡ್ಡ ಮೊತ್ತವೇ ಸಿಕ್ಕಿತು. ಹೀಗಿರುವಾಗ ಇಬ್ಬರು ಸ್ಟಾರ್ ನಟರು ಒಂದೇ ಚಿತ್ರದಲ್ಲಿ ದೊಡ್ಡ ಮಟ್ಟದಲ್ಲಿ ಕಾಣಿಸಿಕೊಂಡರೆ, ಆಗ ಚಿತ್ರದ ಬಿಜಿನೆಸ್ ಸಹ ದೊಡ್ಡ ಮಟ್ಟದಲ್ಲಿ ಆಗುವುದರಿಂದ, 'ಟೈಗರ್ ವರ್ಸಸ್ ಪಠಾಣ್' ಚಿತ್ರಕ್ಕೆ 500 ಕೋಟಿ ರೂ.ವರೆಗೂ ಎತ್ತಿಡುವುದಕ್ಕೆ ಆದಿತ್ಯ ಚೋಪ್ರಾ ತಯಾರಿ ನಡೆಸಿದ್ದಾರೆ ಎಂದು ಹೇಳಲಾಗುತ್ತಿದೆ.