ಸಿನಿವಾಣಿ

ಲೈಂಗಿಕ ದೌರ್ಜನ್ಯ ಪ್ರಕರಣ: ನೃತ್ಯ ನಿರ್ದೇಶಕ ಗಣೇಶ್ ಆಚಾರ್ಯ ವಿರುದ್ಧ ಚಾರ್ಜ್‌ಶೀಟ್

ಬಾಲಿವುಡ್‌ ಹಾಗೂ ದಕ್ಷಿಣ ಭಾರತದಲ್ಲಿ ಬಹಳಷ್ಟು ಹೆಸರುವಾಸಿಯಾಗಿರುವ ಖ್ಯಾತ ನೃತ್ಯ ನಿರ್ದೇಶಕ, ನಟ ಗಣೇಶ್ ಆಚಾರ್ಯ ವಿರುದ್ಧ 2020 ರಲ್ಲಿ ದಾಖಲಾಗಿದ್ದ ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಚಾರ್ಜ್‌ಶೀಟ್ ದಾಖಲಿಸಲಾಗಿದೆ. ಗಣೇಶ್ ಆಚಾರ್ಯ ಅವರ ವಿರುದ್ಧ ಸಹ ನೃತ್ಯಗಾರ್ತಿಯೊಬ್ಬರು ಲೈಂಗಿಕ ದೌರ್ಜನ್ಯದ ಆರೋಪ ಹೊರಿಸಿ, ಓಶಿವಾರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಗಣೇಶ್ ಆಚಾರ್ಯ ಅವರು ಇಟ್ಟಿದ್ದ ಲೈಂಗಿಕ ಬೇಡಿಕೆಯನ್ನು ತಾವು ನಿರಾಕರಿಸಿದ್ದ ನಂತರವೂ ಆಕೆಯನ್ನು ಕೆಟ್ಟ ರೀತಿಯಲ್ಲಿ ಮುಟ್ಟಿದ್ದಾಗಿ, ನೀಲಿ ಚಿತ್ರಗಳನ್ನು ಬಲವಂತದಿಂದ ತೋರಿಸಿದ್ದಾಗಿ ಆ ಮಹಿಳೆ ದೂರಿನಲ್ಲಿ ತಿಳಿಸಿದ್ದರು.
ಜತೆಗೆ, 2019 ರಲ್ಲಿ ತನ್ನ ಜೊತೆ ಲೈಂಗಿಕ ಸಂಪರ್ಕ ಬೆಳೆಸುವಂತೆ ಗಣೇಶ್ ಆಚಾರ್ಯ ಆ ನೃತ್ಯಗಾರ್ತಿಯನ್ನು ಕೇಳಿದ್ದರು ಎಂಬ ಆರೋಪವನ್ನು ಮಹಿಳೆ ಮಾಡಿದ್ದರು. ಸಿನಿಮಾ ರಂಗದಲ್ಲಿ ಬೆಳೆಯಬೇಕು ಅಂದರೆ ಇದೆಲ್ಲಾ ಸಹಜ ಎಂದು ಗಣೇಶ್ ಅವರು ಆಕೆಯನ್ನು ಬಲವಂತ ಮಾಡಿದ್ದಾರೆ ಎನ್ನಲಾಗಿದೆ. ಇದೀಗ, ಅದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಓಶಿವಾರ ಪೊಲೀಸರು ಮೆಟ್ರೊಪಾಲಿಟನ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯಕ್ಕೆ ಚಾರ್ಜ್‌ಶೀಟ್ ಅನ್ನು ಸಲ್ಲಿಸಿದ್ದಾರೆ.
ಗಣೇಶ್ ಆಚಾರ್ಯ ಮಾತ್ರವೇ ಅಲ್ಲದೆ ಅವರ ಸಹಾಯಕನ ಮೇಲೂ ಮಹಿಳೆ ದೂರು ದಾಖಲಿಸಿದ್ದರು. ಅಸಭ್ಯವಾಗಿ ಸ್ಪರ್ಶಿಸುವುದು, ಹಿಂಬಾಲಿಸುವುದು, ಲೈಂಗಿಕ ದೃಷ್ಟಿಯಿಂದ ನೋಡುವುದು ಸೇರಿ ಇತರೆ ಆರೋಪಗಳನ್ನು ಮಾಡಿದ್ದರು. ಚಾರ್ಜ್ ಶೀಟ್ ದಾಖಲಾಗಿರುವ ಬಗ್ಗೆ ಮಾತನಾಡಿರುವ ನೃತ್ಯ ನಿರ್ದೇಶಕ ಗಣೇಶ್ ಅವರ ವಕೀಲ ರವಿ ಅವರು, ''ನನಗೆ ಚಾರ್ಜ್ ಶೀಟ್ ಇನ್ನೂ ಸಿಕ್ಕಿಲ್ಲ. ಹಾಗಾಗಿ, ಈ ಬಗ್ಗೆ ಈಗಲೇ ಏನೂ ಮಾತನಾಡಲಾರೆ. ಆದರೆ, ಎಫ್‌ಐಆರ್‌ನಲ್ಲಿ ಇರುವ ಎಲ್ಲ ಸೆಕ್ಷನ್‌ಗಳು ಜಾಮೀನು ನೀಡಬಹುದಾದವುಗಳೇ ಆಗಿವೆ'', ಎಂದು ಮಾದ್ಯಮಗಳಿಗೆ ತಿಳಿಸಿದ್ದಾರೆ.