ಮುಂಬೈ: ಕುಡಿದ ಅಮಲಿನಲ್ಲಿ ಯುವತಿಯೊಬ್ಬಳ ಜತೆ ಅಸಭ್ಯವಾಗಿ ವರ್ತಿಸಿರುವ ಆರೋಪದಲ್ಲಿ ಹಿಂದಿ ಧಾರಾವಾಹಿಗಳ ನಟ ಪ್ರಾಚೀನ್ ಚೌಹಾಣ್ರನ್ನು ಬಂಧಿಸಲಾಗಿದೆ.
ಪ್ರಾಚೀನ್ ಕಸೌತಿ ಜಿಂದಗಿ ಕೇ ಸೇರಿ ಹಲವಾರು ಧಾರಾವಾಹಿಗಳಲ್ಲಿ ನಟಿಸಿ, ಸಾಕಷ್ಟು ಅಭಿಮಾನಿಗಳನ್ನು ಹೊಂದಿದ್ದಾರೆ. ಆದರೆ ಅವರು ಯುವತಿಯೊಬ್ಬಳ ಜತೆ ಅಸಭ್ಯವಾಗಿ ವರ್ತಿಸಿದ್ದಾಗಿ ಯುವತಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾಳೆ. ಗುರುವಾರದಂದು ಪ್ರಾಚೀನ್ ಮನೆಯಲ್ಲಿ ಪಾರ್ಟಿ ಆಯೋಜಿಸಲಾಗಿತ್ತು. ಆ ಪಾರ್ಟಿಗೆ ಸಂತ್ರಸ್ತೆ ಆಕೆಯ ಸ್ನೇಹಿತೆಯೊಂದಿಗೆ ಹೋಗಿದ್ದಾಗ ಪ್ರಾಚೀನ್ ಅಸಭ್ಯವಾಗಿ ವರ್ತಿಸಿದ್ದಾಗಿ ಹೇಳಲಾಗಿದೆ.
ಗುರುವಾರ ಅಲ್ಲಿಂದ ಮನೆಗೆ ತೆರಳಿದ ಯುವತಿ ಶುಕ್ರವಾರ ಸಂಜೆ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾಳೆ. ದೂರಿನ ಆಧಾರದ ಮೇಲೆ ಪ್ರಕರಣ ದಾಖಲಿಸಿಕೊಂಡು ನಟನನ್ನು ಬಂಧಿಸಲಾಗಿದೆ. ಆರೋಪಿ ಸ್ಥಾನದಲ್ಲಿರುವ ಪ್ರಾಚೀನ್ ವಿರುದ್ಧ ಸೆಕ್ಷನ್ 354, 323, ಹಾಗೂ 506 ಅಡಿ ದೂರು ದಾಖಲು ಮಾಡಿಕೊಳ್ಳಲಾಗಿದೆ. (ಏಜೆನ್ಸೀಸ್)