ಮುಂಬೈನಲ್ಲೀಗ ಒಂದೆಡೆ ಕರೊನಾ ಮತ್ತೊಂದೆಡೆ ನೆರೆಹಾವಳಿ ಇದರ ಜತೆಗೆ ಸುಶಾಂತ್ ಆತ್ಮಹತ್ಯೆ ಪ್ರಕರಣ ಸದ್ದು ಮಾಡುತ್ತಿದೆ. ಸಿಬಿಐ ತನಿಖೆಗೆ ವಹಿಸಲಾಗುತ್ತಿದ್ದಂತೆ, ಮತ್ತಷ್ಟು ತಿರುವು ಪಡೆದುಕೊಳ್ಳುತ್ತಿದೆ. ಈ ನಡುವೆ, ಪ್ರಕರಣದ ಸಾಕ್ಷ್ಯಗಳನ್ನು ಮುಂಬೈ ಪೊಲೀಸ್ ನಾಶಪಡಿಸುತ್ತಿದ್ದಾರೆ ಎಂಬ ಗಂಭೀರ ಆರೋಪವೂ ಕೇಳಿಬರುತ್ತಿದೆ. ಇದೆಲ್ಲವನ್ನು ಅರಿತ ಮಹಾರಾಷ್ಟ್ರ ಬಿಜೆಪಿ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರಿಗೆ ಪತ್ರ ಬರೆದಿದೆ.
ಇದನ್ನೂ ಓದಿ: ಸಂಬಂಧಗಳ ಹುಡುಕಾಟದಲ್ಲಿ ರಾಧಿಕಾ
ಬಿಹಾರದ ಪಾಟ್ನಾದಲ್ಲಿ ಸುಶಾಂತ್ ಸಾವಿನಲ್ಲಿ ರಿಯಾ ಚಕ್ರವರ್ತಿ ಕೈವಾಡವಿದೆ ಎಂದು ಆರೋಪಿಸಿ ತಂದೆ ಕೆಕೆ ಸಿಂಗ್ ದೂರು ನೀಡಿದ್ದರು. ಆ ಬೆನ್ನಲ್ಲೇ ಬಿಹಾರದ ಪೊಲೀಸ್ ತಂಡ ಮುಂಬೈ ತಲುಪಿತ್ತು. ಆದರೆ, ಹಾಗೆ ಬಂದ ಪೊಲೀಸರಿಗೆ ವಿಚಾರಣೆಗೆ ಸಹಕಾರ ನೀಡದೆ ಮುಂಬೈ ಪೊಲೀಸ್ ಉದ್ಧಟತನ ಮೆರೆದಿತ್ತು. ಇದನ್ನು ಗಂಭೀರವಾಗಿ ಪರಿಗಣಿಸಿದ ಮುಂಬೈನ ಪೂರ್ವ ಕಾಂದಿವಿಲಿ ವಿಧಾನಸಭಾ ಕ್ಷೇತ್ರದ ಶಾಸಕ ಅತುಕ್ ಭಟ್ಕಾಳ್ಕರ್ ಸಿಎಂ ಉದ್ಧವ್ ಠಾಕ್ರೆಗೆ ಪತ್ರ ಬರೆದು, ನಗರ ಪೊಲೀಸ್ ಕಮಿಷನರ್ ಅವರನ್ನು ರಜೆ ಮೇಲೆ ಕಳುಹಿಸುವಂತೆ ಒತ್ತಾಯಿಸಿದ್ದಾರೆ.
ಪ್ರಕರಣ ಇತ್ಯರ್ಥವಾಗುವರೆಗೂ ಸುದೀರ್ಘ ರಜೆ ಮೇಲೆ ಪರಮ್ ಬೀರ್ ಸಿಂಗ್ ಅವರನ್ನು ಕಳುಹಿಸಬೇಕು. ಪ್ರಕರಣದ ಹಾದಿ ತಪ್ಪಿಸುತ್ತಿದ್ದಾರೆ. ಬಿಹಾರ ಪೊಲೀಸ್ ತನಿಖೆಗೂ ತೊಡಕಾಗುತ್ತಿದ್ದಾರೆ. ಹಾಗಾಗಿ ತತಕ್ಷಣ ಆದೇಶ ಹೊರಡಿಸಬೇಕು ಎಂದು ಪತ್ರದ ಮೂಲಕ ಅತುಲ್ ಭಟ್ಕಾಳ್ಕರ್ ಕೋರಿದ್ದಾರೆ. (ಏಜೆನ್ಸೀಸ್)