ಸಿನಿವಾಣಿ

‘ಸರಕಾರು ವಾರಿ ಪಾಟ’ ಸಹ ಮುಂದಿನ ಸಂಕ್ರಾಂತಿಗೆ!

ಹೈದರಾಬಾದ್: ಮಹೇಶ್ ಬಾಬು ಅಭಿನಯದ ಹೊಸ ಚಿತ್ರ ಯಾವುದು? ಎಂಬ ಪ್ರಶ್ನೆಗೆ ಕಳೆದ ವರ್ಷವೇ ಉತ್ತ ಸಿಕ್ಕಿತ್ತು. ಮಹೇಶ್​ ತಂದೆ ಕೃಷ್ಣ ಅವರ ಕಳೆದ ವರ್ಷದ ಹುಟ್ಟುಹಬ್ಬದ ಸಂದರ್ಭದಲ್ಲಿ 'ಸರಕಾರಿ ವಾರು ಪಾಟ' ಎಂಬ ಚಿತ್ರವನ್ನು ಘೋಷಿಸಲಾಗಿತ್ತು. ಈಗ ಆ ಚಿತ್ರವು 2022ರ ಸಂಕ್ರಾಂತಿಗೆ ಬಿಡುಗಡೆಯಾಗುತ್ತಿದೆ.

'ಸರಕಾರಿ ವಾರು ಪಾಟ' ಚಿತ್ರದ ಚಿತ್ರೀಕರಣ ಕಳೆದ ವರ್ಷದ ಕೊನೆಯಲ್ಲಿ ಪ್ರಾರಂಭವಾಗಿದ್ದು, ಈಗಾಗಲೇ ಮುಗಿಯುವ ಹಂತಕ್ಕೆ ಬಂದಿದ್ದು, ಸದ್ಯದಲ್ಲೇ ಚಿತ್ರೀಕರಣ ಮುಕ್ತಾಯವಾಗಲಿದೆ. ಈ ಮಧ್ಯೆ, ಚಿತ್ರವನ್ನು 2022ರ ಜನವರಿ 13ರಂದು ಸಂಕ್ರಾಂತಿ ಹಬ್ಬದಂದು ಬಿಡುಗಡೆ ಮಾಡುವುದಾಗಿ ಚಿತ್ರತಂಡ ಘೋಷಿಸಿದೆ. ಈಗಾಗಲೇ ಪ್ರಭಾಸ್​ ಅಭಿನಯದ 'ರಾಧೇ ಶ್ಯಾಮ್​' ಮತ್ತು ಪವನ್​ ಕಲ್ಯಾಣ್​ ಅಭಿನಯದ 'ಅಯ್ಯಪ್ಪನುಂ ಕೋಶಿಯುಂ' ಚಿತ್ರದ ರೀಮೇಕ್​ ಸಹ ಅದೇ ದಿನ ಬಿಡುಗಡೆಯಾಗುತ್ತಿದ್ದು, ಒಂದೇ ದಿನ ಮೂವರು ದೊಡ್ಡ ಸ್ಟಾರ್​ ನಟರ ಚಿತ್ರಗಳು ಬಿಡುಗಡೆಯಾಗುತ್ತಿರುವುದು ಅಭಿಮಾನಿಗಳಲ್ಲಿ ಖುಷಿ ಮೂಡಿಸಿದೆ.

‘ಸರಕಾರು ವಾರಿ ಪಾಟ’ ಚಿತ್ರವನ್ನು ‘ಗೀತ ಗೋವಿಂದಂ’ ಖ್ಯಾತಿಯ ಪರಶುರಾಮ್ ನಿರ್ದೇಶನ ಮಾಡುತ್ತಿದ್ದಾರೆ. ಇನ್ನು ಮೈತ್ರಿ ಮೂವಿ ಮೇಕರ್ಸ್‌ ಸಂಸ್ಥೆಯು ಈ ಚಿತ್ರ ನಿರ್ಮಿಸುತ್ತಿದ್ದು, ತೆಲುಗಿನ ಜನಪ್ರಿಯ ಸಂಗೀತ ನಿರ್ದೇಶಕ ಎಸ್.ಎಸ್. ಥಮನ್ ಸಂಗೀತ ಸಂಯೋಜಿಸುತ್ತಿದ್ದಾರೆ. ಚಿತ್ರದಲ್ಲಿ ಮಹೇಶ್​ ಬಾಬು ಮತ್ತು ಕೀರ್ತಿ ಸುರೇಶ್​ ಮೊದಲ ಬಾರಿಗೆ ನಾಯಕ-ನಾಯಕಿಯಾಗಿ ಅಭಿನಯಿಸುತ್ತಿದ್ದಾರೆ.