ಮುಂಬೈ: ಸುಶಾಂತ್ ಸಿಂಗ್ ರಜಪೂತ್‍ಗೆ ಅಂಕಿತಾ ಲೋಖಂಡೆ ಮತ್ತು ರಿಯಾ ಚಕ್ರವರ್ತಿ ಅಲ್ಲದೆ, ಸಾರಾ ಅಲಿ ಖಾನ್ ಜತೆಗೂ ಲವ್ ಇತ್ತು ಎಂಬುದು ಈಗಾಗಲೇ ಸಾಕಷ್ಟು ಸುದ್ದಿಯಾಗಿದೆ. ಅವರಿಬ್ಬರ ನಡುವೆ ಪ್ರೀತಿ ಇತ್ತು ಮತ್ತು `ಸೋಂಚರಿಯಾ’ ಚಿತ್ರದ ನಂತರ ಸುಶಾಂತ್ ಅವರನ್ನು ಸಾರಾ ಬಿಟ್ಟು ಹೋದರು ಮತ್ತು ಸುಶಾಂತ್ ಡಿಪ್ರೆಶನ್ಗೆ ಜಾರುವುದಕ್ಕೂ, ರಿಯಾ ಚಕ್ರವರ್ತಿಗೆ ಹತ್ತಿರವಾಗುವುದಕ್ಕೂ ಸಾರಾ ಅಗಲಿಕೆಯೇ ಕಾರಣ ಎಂದು ಹೇಳಲಾಗುತ್ತದೆ.
ಈಗ್ಯಾಕೆ ಈ ವಿಷಯವೆಂದರೆ, ಸುಶಾಂತ್ ಸಿಂಗ್ ರಜಪೂರ್ ನಿಧನರಾಗಿ ಜೂನ್ 14ಕ್ಕೆ ಒಂದು ವರ್ಷವಾಗಿದೆ. ಈ ಒಂದು ವರ್ಷದಲ್ಲಿ ಸುಶಾಂತ್ ಬಗ್ಗೆ ಹೆಚ್ಚು ಮಾತನಾಡದ ಸಾರಾ, ಈಗ ಮೊದಲ ಬಾರಿಗೆ ಮಾತನಾಡಿದ್ದಾರೆ. ಸುಶಾಂತ್ ಕುರಿತು ಇನ್ಸ್ಟಾಗ್ರಾಂನಲ್ಲಿ ಒಂದು ಪೋಸ್ಟ್ ಹಾಕಿದ್ದಾರೆ.
'ನನಗೆ ಯಾವಾಗೆಲ್ಲ ಸಹಾಯ, ಸಲಹೆ ಮತ್ತು ನಗು ಬೇಕಿತ್ತೋ, ನೀನು ಆಗ ಹಾಜರಿರುತ್ತಿದೆ. ಅಭಿನಯದ ಪ್ರಪಂಚಕ್ಕೆ ನನ್ನನ್ನು ಪರಿಚಯಿಸಿದ್ದೇ ನೀನು. ಕನಸುಗಳನ್ನು ನನಸುಗಳನ್ನು ಮಾಡಬಹುದು ಎಂದು ತೋರಿಸಿಕೊಟ್ಟಿದ್ದೇ ನೀನು. ಇವತ್ತಿಗೆ ನಾನೇನಾಗಿದ್ದೇನೋ, ಅದಕ್ಕೆ ಕಾರಣವೇ ನೀನು. ನೀನಿಲ್ಲ ಎಂದು ನಂಬಲು ಇನ್ನೂ ಸಾಧ್ಯವಾಗುತ್ತಿಲ್ಲ. ನಕ್ಷತ್ರಗಳನ್ನು ನೋಡಿದಾಗ, ಸೂರ್ಯೋದಯವನ್ನು ಕಂಡಾಗ, ನೀನಲ್ಲಿದ್ದೀಯ ಎಂದನಿಸುತ್ತದೆ. ಕೇದಾರ್ನಾಥ್ನಿಂದ ಆಂಡ್ರೋಮೆಡಾವರೆಗೂ ...' ಎಂದು ಸಾರಾ ಬರೆದುಕೊಂಡಿದ್ದಾರೆ.
ಇದನ್ನೂ ಓದಿ: ಸಾರಾ ಬಿಟ್ಟು ಹೋದಾಗ ಮಗುವಿನಂತೆ ಅತ್ತಿದ್ದರಂತೆ ಸುಶಾಂತ್
ಸುಶಾಂತ್ ಸಿಂಗ್ 2019ರಲ್ಲಿ ತಮ್ಮ ಸ್ನೇಹಿತರೊಂದಿಗೆ ಸ್ಪಷಲ್ ಚಾರ್ಟರ್ಡ್ ವಿಮಾನದಲ್ಲಿ ಬ್ಯಾಂಕಾಕ್ ಟ್ರಿಪ್‍ಗೆ ಹೋಗಿದ್ದರಂತೆ. ಈ ಸಂದರ್ಭದಲ್ಲಿ ಸೈಫ್ ಅಲಿ ಖಾನ್ ಪುತ್ರಿ ಸಾರಾ ಅಲಿ ಖಾನ್ ಸಹ ಬಂದಿದ್ದರಂತೆ ಮತ್ತು ಬ್ಯಾಂಕಾಕ್‍ನಲ್ಲಿ ಅವರಿಬ್ಬರು ಮೂರು ದಿನಗಳ ಕಾಲ ಹೋಟೆಲ್ ರೂಮ್ ಬಿಟ್ಟು ಹೊರಬರಲಿಲ್ಲ ಎಂದು ಸುಶಾಂತ್ ಸ್ನೇಹಿತರು ಕಳೆದ ವರ್ಷ ಪೊಲೀಸರ ವಿಚಾರಣೆ ಸಂದರ್ಭದಲ್ಲಿ ಹೇಳಿಕೊಂಡಿದ್ದರು.