ಸಿನಿವಾಣಿ

ಇನ್ನೂ ಹಾಸಿಗೆ ಹಿಡಿದಿಲ್ಲ; ಏನೇನೋ ಬರೀಬೇಡಿ: ಸಂಜಯ್​ ದತ್​

ಮುಂಬೈ: ಸಂಜಯ್​ ದತ್​ ಕ್ಯಾನ್ಸರ್​ನಿಂದ ಬಳಲುತ್ತಿರುವುದು ಮತ್ತು ಅದಕ್ಕಾಗಿ ಚಿಕಿತ್ಸೆ ಪಡೆಯುತ್ತಿರುವುದು ಎಲ್ಲರಿಗೂ ಗೊತ್ತಿದೆ. ಆದರೆ, ತಾನಿನ್ನೂ ಹಾಸಿಗೆ ಹಿಡಿದಿಲ್ಲ, ತನ್ನ ಬಗ್ಗೆ ಏನೇನೋ ಬರೀಬೇಡಿ ಎಂದು ಸಂಜಯ್​ ದತ್​ ಹೇಳಿಕೊಂಡಿದ್ದಾರೆ.

ಬಾಲಿವುಡ್​ನ ಜನಪ್ರಿಯ ಹೇರ್​ಸ್ಟೈಲಿಸ್ಟ್​ ಆಲಿಮ್​ ಹಕೀಮ್​ ಅವರು ಒಂದು ಹೊಸ ಸಲೋನ್​ ಪ್ರಾರಂಭಿಸಿದ್ದಾರೆ. ಈ ಸಲೋನ್​ನ ಇತ್ತೀಚೆಗೆ ಉದ್ಘಾಟಿಸಿದ್ದು ಸಂಜಯ್​ ದತ್​. ಆಲಿಮ್​ ಮತ್ತು ಸಂಜಯ್​ ಅವರದ್ದು ಸುಮಾರು 40 ವರ್ಷಗಳ ಹಿಂದಿನ ಸ್ನೇಹವಂತೆ. ಸಂಜಯ್​ ದತ್​ ಅವರ ಮೊದಲ ಚಿತ್ರ 'ರಾಕಿ'ಗೆ ಅವರಿಗೆ ಹೇರ್​ಸ್ಟೈಲ್​ ಮಾಡಿದ್ದು ಅದೇ ಹಕೀಮ್​.

ಅದೇ ಕಾರಣಕ್ಕೆ ಅವರು ಸಲೋನ್​ ಪ್ರಾರಂಭಿಸಿದಾಗ, ಸಂಜಯ್​ ದತ್​ ಬಂದು ಶುಭ ಹಾರೈಸಿ ಹೋಗಿದ್ದಾರೆ. ಈ ಸಂದರ್ಭದಲ್ಲಿ ಅಲ್ಲಿದ್ದ ಮಾಧ್ಯಮದವರ ಜತೆಗೆ ಮಾತನಾಡಿರುವ ಅವರು, ಕ್ಯಾನ್ಸರ್​ ಗೆದ್ದು ಬರುವುದಾಗಿ ಹೇಳಿದ್ದಾರೆ.

ಮಾಧ್ಯಮದವರೊಂದಿಗೆ ಜಾಲಿಯಾಗಿ ಮಾತನಾಡಿದ ಸಂಜಯ್​ ದತ್​, 'ಇನ್ನು ಹುಷಾರು ತಪ್ಪಿ ಹಾಸಿಗೆ ಹಿಡಿದಿಲ್ಲ, ಹಾಗೆಲ್ಲಾ ಬರೀಬೇಡಿ' ಎಂದು ತಮಾಷೆ ಮಾಡಿ, ಸುತ್ತಲ್ಲಿದ್ದವರನ್ನೆಲ್ಲಾ ನಗಿಸಿದ್ದಾರಂತೆ. 'ಜೀವನದಲ್ಲಿ ಎಷ್ಟೋ ಸಮಸ್ಯೆಗಳನ್ನು ಎದುರಿಸಿ ಬಂದಿದ್ದೇನೆ. ಈ ಸಮಸ್ಯೆಯನ್ನೂ ಗೆದ್ದು ಬರುತ್ತೇನೆ ಎಂಬ ನಂಬಿಕೆ ಇದೆ' ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.