ಕಳೆದ ಕೆಲವು ದಿನಗಳಿಂದ ಕ್ಯಾನ್ಸರ್ ಚಿಕಿತ್ಸೆ ಪಡೆಯುತ್ತಿರುವ ಸಂಜಯ್ ದತ್, ಸದ್ದಿಲ್ಲದೆ ಹೊರಗೆ ಬಂದು ಶೂಟಿಂಗ್ವೊಂದರಲ್ಲಿ ಭಾಗವಹಿಸಿದ್ದಾರೆ. ಅಷ್ಟೇ ಅಲ್ಲ, ತಮ್ಮ ಭಾಗದ ಚಿತ್ರೀಕರಣವನ್ನು ಸಹ ಮುಗಿಸಿ ಹೋಗಿದ್ದಾರೆ.
ಇಷ್ಟಕ್ಕೂ ಯಾವ ಚಿತ್ರ ಗೊತ್ತಾ ಅದು. ಯಶ್ರಾಜ್ ಫಿಲಂಸ್ ನಿರ್ಮಾಣದ 'ಶಂಶೇರಾ'. ಕರಣ್ ಮಲ್ಹೋತ್ರಾ ನಿರ್ದೇಶನದ ಈ ಚಿತ್ರದಲ್ಲಿ ರಣಬೀರ್ ಕಪೂರ್, ವಾಣಿ ಕಪೂರ್, ರೋನಿತ್ ರಾಯ್, ಇರಾವತೆ ಹರ್ಷೆ ಸೇರಿದಂತೆ ಹಲವು ಪ್ರತಿಭಾವಂತರು ನಟಿಸುತ್ತಿದ್ದಾರೆ. ಸಂಜಯ್ ದತ್ ಸಹ ಒಂದು ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.
ಲಾಕ್ಡೌನ್ಗೂ ಮುನ್ನ, ಸಂಜಯ್ ದತ್ ಅಭಿನಯದ ಬಹುತೇಕ ಚಿತ್ರೀಕರಣ ಮುಗಿದಿತ್ತು. ಇನ್ನೆರೆಡು ದಿನಗಳ ಪ್ಯಾಚ್ವರ್ಕ್ ಮುಗಿದಿದ್ದರೆ, ಸಂಜಯ್ ದತ್ ಕೆಲಸ ಸಂಪೂರ್ಣವಾಗುತಿತ್ತು. ಆದರೆ, ಅಷ್ಟರಲ್ಲಿ ಲಾಕ್ಡೌನ್ ಘೋಷಣೆಯಾಗಿದ್ದರಿಂದ, ಎಲ್ಲಾ ಕೆಲಸ ನಿಂತು ಹೋಯಿತು.
ಈಗ ಲಾಕ್ಡೌನ್ ತೆರವಾದರೂ, ಸಂಜಯ್ ದತ್ ಕ್ಯಾನ್ಸರ್ಗಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಮಧ್ಯೆ, ತಮ್ಮ ಭಾಗದ ಎರಡು ದಿನಗಳ ಕೆಲಸವನ್ನು ಸಂಜಯ್ ದತ್ ಮುಗಿಸಿಕೊಟ್ಟಿದ್ದಾರೆ. ಸೋಮವಾರವಷ್ಟೇ ಅವರು ಯಶ್ರಾಜ್ ಸ್ಟುಡಿಯೋಸ್ಗೆ ಹೋಗಿ ತಮ್ಮ ಕೆಲಸವನ್ನು ಮುಗಿಸಿಕೊಟ್ಟು ವಾಪಸ್ಸಾಗಿದ್ದಾರೆ.
ಮೊದಲೇ ಕರೊನಾ ಹಾವಳಿ ಜಾಸ್ತಿಯಾಗುತ್ತಿದೆ. ಮೇಲಾಗಿ ಸಂಜಯ್ ದತ್ ಅವರಿಗೆ ಅನಾರೋಗ್ಯ. ಹಾಗಾಗಿ ಬಹಳ ಕಟ್ಟುನಿಟ್ಟಿನ ಮುನ್ನೆಚರಿಕೆಗಳನ್ನು ತೆಗೆದುಕೊಂಡು ಸಂಜಯ್ ಭಾಗದ ಚಿತ್ರೀಕರಣ ಮಾಡಲಾಗಿದೆಯಂತೆ.
ಅಂದಹಾಗೆ, 'ಶಂಶೇರಾ' ಚಿತ್ರವನ್ನು ಚಿತ್ರಮಂದಿರಗಳಲ್ಲೇ ಬಿಡುಗಡೆ ಮಾಡುವುದಕ್ಕೆ ಯಶ್ರಾಜ್ ಫಿಲಂಸ್ ಚಿಂತನೆ ನಡೆಸಿದ್ದು. ಚಿತ್ರಮಂದಿರಗಳಲ್ಲಿ ಚಿತ್ರ ಪ್ರದರ್ಶನ ಪ್ರಾರಂಭವಾದ ಮೇಲಷ್ಟೇ ಚಿತ್ರ ಬಿಡುಗಡೆಯಾಗಲಿದೆ.