ಸಿನಿವಾಣಿ

ಮತ್ತೊಮ್ಮೆ ಬರ್ತಿದ್ದಾನಾ 'ಮುನ್ನಾ ಭಾಯ್​'? ಹೊಸ ಪೋಸ್ಟರ್​ ಬಿಡುಗಡೆ

ಮುಂಬೈ: ಸಂಜಯ್​ ದತ್​ ಮತ್ತು ಅರ್ಶದ್​ ವಾರ್ಸಿ ಇಬ್ಬರೂ 'ಮುನ್ನಾ ಭಾಯ್​ ಎಂ.ಬಿ.ಬಿ.ಎಸ್​' ಮತ್ತು 'ಲಗೇ ರಹೋ ಮುನ್ನಾ ಭಾಯ್​' ಚಿತ್ರಗಳಲ್ಲಿ ಮಾಡಿದ ಮೋಡಿ ಅಷ್ಟಿಷ್ಟಲ್ಲ. ಇಬ್ಬರೂ ಈ ಚಿತ್ರದ ಮೂಲಕ ಮನರಂಜನೆ ನೀಡುವುದರ ಜತೆಗೆ, ಹಲವು ವಿಷಯಗಳನ್ನು ಹೇಳಿದ್ದರು.

ಈ ಎರಡು ಚಿತ್ರಗಳ ನಂತರ 'ಮುನ್ನಾ ಭಾಯ್ ಚಲೆ ಅಮೆರಿಕ' ಎಂಬ ಚಿತ್ರ ಘೋಷಣೆಯಾಗುವುದರ ಜತೆಗೆ ಟೀಸರ್​ ಸಹ ಬಿಡುಗಡೆಯಾಗಿತ್ತು. ಆದರೆ, ಕಾರಣಾಂತರಗಳಿಂದ ಆ ಚಿತ್ರ ಬರಲೇ ಇಲ್ಲ. ಈಗ ಬಹಳ ವರ್ಷಗಳ ನಂತರ ಸಂಜಯ್​ ದತ್​ ಮತ್ತು ಅರ್ಶದ್​ ವಾರ್ಸಿ ಅಭಿನಯದ ಹೊಸ ಚಿತ್ರವೊಂದರ ಪೋಸ್ಟರ್​ ಬಿಡುಗಡೆಯಾಗಿದೆ. ಇಬ್ಬರೂ ಜೈಲಿನಲ್ಲಿ ತಲೆ ಮೇಲೆ ಕೈ ಹೊತ್ತು ನಿಂತಿರುವ ಪೋಸ್ಟರ್​ ಎಲ್ಲಡೆ ಗಮನ ಸೆಳೆಯುತ್ತಿದೆ.

ಇದು ಸಹ 'ಮುನ್ನಾ ಭಾಯ್​' ಸರಣಿಯ ಇನ್ನೊಂದು ಚಿತ್ರವಾ? ಎಂಬ ಪ್ರಶ್ನೆ ಬರಬಹುದು. ಹಾಗೇನಿಲ್ಲ. ಈ ಚಿತ್ರಕ್ಕೂ ಆ ಸರಣಿಗೂ ಸಂಬಂಧವಿಲ್ಲ. ಸಂಜಯ್​ ದತ್​ ಮತ್ತು ಅರ್ಶದ್​ ಜತೆಗೆ ನಟಿಸುತ್ತಿದ್ದಾರೆ ಎಂಬ ವಿಷಯ ಬಿಟ್ಟರೆ, ಮಿಕ್ಕಂತೆ ಇದು ಬೇರೆ ಚಿತ್ರವೇ. ಇದಕ್ಕೂ ಮುನ್ನ ಕೆಲವು ಮ್ಯೂಸಿಕ್​ ವೀಡಿಯೋ ಮತ್ತು ವೆಬ್​ ಸರಣಿಗಳನ್ನು ನಿರ್ದೇಶನ ಮಾಡಿದ್ದ ಸಿದ್ಧಾಂತ್​ ಸಚ್ದೇವ್​ ಈ ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದು, ಖುದ್ದು ಸಂಜಯ್​ ದತ್​ ನಿರ್ಮಿಸುತ್ತಿದ್ದಾರೆ.

ಈ ಚಿತ್ರ ಇದೇ ವರ್ಷ ಬಿಡುಗಡೆಯಾಗುತ್ತಿದೆ ಎಂಬ ವಿಷಯ ಬಿಟ್ಟರೆ, ಮಿಕ್ಕಂತೆ ಎಲ್ಲವನ್ನೂ ರಹಸ್ಯವಾಗಿಡಲಾಗಿದೆ. ಸದ್ಯಕ್ಕೆ ಚಿತ್ರದ ಹೆಸರು ಘೋಷಣೆಯಾಗಿಲ್ಲ. ಹಾಗೆಯೇ, ಚಿತ್ರದ ತಾರಾಗಣ ಮತ್ತು ತಾಂತ್ರಿಕ ವರ್ಗದಲ್ಲಿ ಯಾರೆಲ್ಲ ಇರುತ್ತಾರೆ ಎಂದು ಇನ್ನೂ ಗೊತ್ತಾಗಿಲ್ಲ. ಗಣರಾಜ್ಯೋತ್ಸವದ ಅಂಗವಾಗಿ ಚಿತ್ರದ ಹೊಸ ಪೋಸ್ಟರ್​ ಬಿಡುಗಡೆಯಾಗಿದೆ.