ದೀಪಾವಳಿ ಅಂದರೆ ಮಕ್ಕಳಿಗೆ ಪಟಾಕಿ ಹಬ್ಬ. ಮಹಿಳೆಯರಿಗೆ ಬೆಳಕಿನ ಹಬ್ಬ, ದೀಪಗಳ ಹಬ್ಬ. ಹೀಗಾಗಿಯೇ ಮನೆಯನ್ನು ದೀಪಗಳಿಂದ ಅಲಂಕರಿಸಿ ಸಂಭ್ರಮಿಸುತ್ತಾರೆ. ಸಿನಿಮಾರಂಗದ ನಟಿಮಣಿಯರೂ ಇದರಿಂದ ಹೊರತಾಗಿಲ್ಲ. ವರ್ಷದ ಈ ಕೊನೆಯ ಹಬ್ಬವನ್ನು ಬಹಳ ಸಡಗರದಿಂದ ಆಚರಿಸುತ್ತಾರೆ. ತಮ್ಮ ಈ ಬಾರಿಯ ದೀಪಾವಳಿ ಆಚರಣೆಯ ಖುಷಿಯನ್ನು ನಟಿಯರು ವಿಜಯವಾಣಿ ಜತೆ ಹಂಚಿಕೊಂಡಿದ್ದಾರೆ.
ನಾನು ಚಿಕ್ಕವಳಿದ್ದಾಗ ಪಟಾಕಿ ಸಿಡಿಸುತ್ತಿದ್ದೆ. ಈಗ ಹಲವು ವರ್ಷಗಳಿಂದ ಪಟಾಕಿ ಸಿಡಿಸುವುದನ್ನು ಬಿಟ್ಟಿದ್ದೇನೆ. ಮನೆಯಲ್ಲಿ ದೀಪ ಹಚ್ಚಿ, ದೇವರ ಪೂಜೆ ಮಾಡಿ ಸರಳವಾಗಿ ದೀಪಾವಳಿ ಆಚರಿಸುತ್ತೇನೆ. ನಮ್ಮೂರು ಮಡಿಕೇರಿ. ಇಲ್ಲಿ ದೊಡ್ಡ ಮಟ್ಟದಲ್ಲಿ ಪಟಾಕಿ ಸಿಡಿಸುವುದಿಲ್ಲ. ಆದರೆ, ಬೆಂಗಳೂರಿನಲ್ಲಿ ಪಟಾಕಿ ಅಬ್ಬರ ಜೋರಿರುತ್ತೆ. ಹೀಗಾಗಿಯೇ ಈ ವರ್ಷ ಊರಿಗೆ ಬಂದಿದ್ದೇನೆ. ಇಲ್ಲೇ ಶಾಂತ, ಸುಂದರ ಪರಿಸರದಲ್ಲಿ ದೀಪಾವಳಿ ಆಚರಿಸುತ್ತಿದ್ದೇನೆ. ಜತೆಗೆ ಮನೆಯಲ್ಲಿ ಒಬ್ಬಟ್ಟು, ಕರ್ಜಿಕಾಯಿ ಸೇರಿದಂತೆ ಸಿಹಿ ತಿನಿಸುಗಳನ್ನು ಸವಿಯುತ್ತೇನೆ.
| ಸಿಂಧು ಲೋಕನಾಥ್
ನನಗೆ ದೀಪ್ತಿ ಅಂತ ಹೆಸರಿಡಲಿ ಕಾರಣವೇ ಈ ದೀಪಾವಳಿ ಹಬ್ಬ. ನಮ್ಮ ಮನೆಯಲ್ಲಿ ಭರ್ಜರಿಯಾಗಿ ಮೂರು ದಿನಗಳ ಕಾಲ ದೀಪಾವಳಿ ಹಬ್ಬವನ್ನು ಆಚರಿಸುತ್ತೇವೆ. ಫ್ರೆಂಡ್ಸ್ ಜತೆ ಒಂದು ದಿನ, ಕುಟುಂಬದವರು ಮತ್ತು ಸಂಬಂಧಿಕರ ಜತೆ ಎರಡು ದಿನಗಳ ಆಚರಣೆ ಇರುತ್ತದೆ. ಫ್ರೆಂಡ್ಸ್ ಅವರ ಮನೆಯಿಂದ ಒಂದೊಂದು ಅಡುಗೆ ಮಾಡಿಕೊಂಡು ಬರುತ್ತಾರೆ. ಎಲ್ಲರೂ ನಮ್ಮ ಮನೆಯಲ್ಲಿ ಸೇರಿ, ಎಲ್ಲ ಖಾದ್ಯಗಳನ್ನು ಸವಿಯುತ್ತೇವೆ. ಬಳಿಕ ಕಾರ್ಡ್ಸ್ ಆಡುತ್ತೇವೆ, ಹರಟೆ ಹೊಡೆಯುತ್ತೇವೆ. ಹಾಗೇ ಸಂಬಂಧಿಕರು ಬಂದಾಗಲೂ ನಮ್ಮ ಮನೆಯಲ್ಲಿ ಥರಹೇವಾರಿ ಊಟ, ತಿಂಡಿ ಮಾಡುತ್ತೇವೆ. ಕೊಬ್ಬರಿ ಹೋಳಿಗೆ, ಬೇಳೆ ಒಬ್ಬಟ್ಟು, ರವೆ ಉಂಡೆ, ಶ್ರೀಖಂಡ, ಆಂಬೊಡೆ, ಬೇಸನ್ ಲಡ್ಡು ಸೇರಿದಂತೆ ಹಲವು ತಿಂಡಿಗಳನ್ನು ಮಾಡುತ್ತೇವೆ. ನನಗೆ ಜೋರು ಶಬ್ದ ಮಾಡುವ ಪಟಾಕಿಗಳು ಇಷ್ಟವಾಗುವುದಿಲ್ಲ. ಹೀಗಾಗಿಯೇ ಸುರ್ಸುರ್ ಬತ್ತಿ, ಫ್ಲವರ್ ಪಾಟ್ನಂತ ಕೆಲವು ಪಟಾಕಿಗಳನ್ನಷ್ಟೇ ಸಿಡಿಸುತ್ತೇನೆ.
| ದೀಪ್ತಿ ಮೋಹನ್
ಸಣ್ಣ ವಯಸ್ಸಿನಲ್ಲಿ ಪಟಾಕಿ ಸಿಡಿಸುವುದೇ ದೊಡ್ಡ ಸಂಭ್ರಮವಾಗಿತ್ತು. ಪರೀಕ್ಷೆಗೆ ಓದಲು ಬೆಳಗ್ಗೆ ಬೇಗನೇ ಏಳದಿದ್ದರೂ, ದೀಪಾವಳಿ ಹಬ್ಬದ ದಿನಗಳಲ್ಲಿ ಮುಂಜಾನೆ 3.30ಕ್ಕೇ ಎದ್ದು ಎಣ್ಣೆ ಸ್ನಾನ ಮಾಡಿ ರೆಡಿಯಾಗಿಬಿಡುತ್ತಿದ್ದೆ. ಸೋದರ ಸಂಬಂಧಿಗಳ ಜತೆ ದಿನವಿಡೀ ಪಟಾಕಿ ಸಿಡಿಸುತ್ತಿದ್ದೆ. ಆದರೆ, ಎರಡು ವರ್ಷಗಳ ಹಿಂದೆ ದೀಪಾವಳಿ ಹಬ್ಬದ ದಿನವೇ ನನ್ನ ಅಜ್ಜಿ ವಿಧಿವಶರಾದರು. ಆಗಿನಿಂದ ನಮ್ಮ ಮನೆಯಲ್ಲಿ ದೀಪಾವಳಿ ಹಬ್ಬವನ್ನು ಅಷ್ಟು ದೊಡ್ಡ ಮಟ್ಟದಲ್ಲಿ ಆಚರಿಸುವುದಿಲ್ಲ. ಆದರೆ ಅಮ್ಮನನ್ನು ಮಾತ್ರ ಹಬ್ಬದ ಸಮಯದಲ್ಲಿ ಅಜ್ಜಿಯ ನೆನಪಿನಲ್ಲಿ ಬೇಸರಗೊಳ್ಳುತ್ತಾರೆ ಅಂತ ಪ್ರತಿ ದೀಪಾವಳಿ ಸಮಯ ದಲ್ಲೂ ಹೊರಗೆ ಕರೆದುಕೊಂಡು ಹೋಗುತ್ತೇನೆ. ಈ ಬಾರಿ ಮಂಗಳೂರಿಗೆ ಬಂದಿದ್ದೇವೆ.
| ಮಾತಂಗಿ ಪ್ರಸನ್ನ
ಈ ವರ್ಷದ ದೀಪಾವಳಿ ನನಗೆ ತುಂಬ ವಿಶೇಷ. ಏಕೆಂದರೆ ನಾನು ಮದುವೆಯಾದ ಬಳಿಕ ಆಚರಿಸುತ್ತಿರುವ ಮೊದಲ ದೀಪಾವಳಿ ಇದು. ಒಂದು ದಿನ ಬೆಂಗಳೂರಿನಲ್ಲಿ ಅಪ್ಪ, ಅಮ್ಮನಿಗೆ ಹೊಸ ಬಟ್ಟೆ ಕೊಡಿಸಿ ಅವರ ಮನೆಯಲ್ಲಿ ಬೆಳಕಿನ ಹಬ್ಬ ಆಚರಿಸುತ್ತೇನೆ. ಬಳಿಕ ಮಂಗಳೂರಿಗೆ ಬಂದು ಪತಿಯ ಮನೆಯಲ್ಲಿ ಎರಡು ದಿನ ಆಚರಣೆ ಇರುತ್ತದೆ. ಲಕ್ಷ್ಮೀ ಹಬ್ಬ ಕೂಡ ಆಚರಿಸುತ್ತೇವೆ. ಸಾಫ್ಟ್ವೇರ್ ಕಂಪನಿ ಪ್ರಾರಂಭಿಸುತ್ತಿರುವುದು ನಮ್ಮ ಈ ಬಾರಿಯ ದೀಪಾವಳಿ ಹಬ್ಬವನ್ನು ಮತ್ತಷ್ಟು ಸ್ಪೆಷಲ್ ಮಾಡಿದೆ.
| ಮಮತಾ ರಾಹುತ್
ಅಪು್ಪ ಕಪ್ ಬ್ಯಾಡ್ಮಿಂಟನ್ ಟೂರ್ನಮೆಂಟ್ ಆಡುತ್ತಿದ್ದೇನೆ. ನಾನು ಸೃಜನ್ ಲೋಕೇಶ್ ಅವರ ತಂಡದಲ್ಲಿದ್ದೇನೆ. ನಮ್ಮ ತಂಡದವರೆಲ್ಲ ಸೇರಿ ಹಬ್ಬ ಆಚರಿಸಲಿದ್ದೇವೆ. ಜತೆಗೆ ನಾನು ಅವಿಭಕ್ತ ಕುಟುಂಬದಲ್ಲಿ ಬೆಳೆದವಳು. ಸಂಬಂಧಿಕರು, ಮಕ್ಕಳು ಎಲ್ಲ ಮನೆಯಲ್ಲಿರುತ್ತಾರೆ. ಎಣ್ಣೆ ಸ್ನಾನ ಮಾಡಿ, ದೇವಸ್ಥಾನಕ್ಕೆ ಹೋಗಿ ಬರುತ್ತೇವೆ. ನಮ್ಮ ಮನೆಯಲ್ಲಿ ಸಾಕು ನಾಯಿಯಿದೆ ಹಾಗೂ ಪಕ್ಕದ ಮನೆಯವರು ಪಕ್ಷಿಗಳನ್ನು ಸಾಕಿದ್ದಾರೆ. ಹೀಗಾಗಿ ನಾನು ಪಟಾಕಿಯಿಂದ ದೂರ.
| ನಿಖಿತಾ ಸ್ವಾಮಿ
ಯಶ್, ರಾಧಿಕಾ ದಂಪತಿ ಮಕ್ಕಳಾದ ಐರಾ ಮತ್ತು ಯಥರ್ವ್ ಜತೆ ಸಡಗರದಿಂದ ದೀಪಾವಳಿ ಹಬ್ಬ ಆಚರಿಸಿದ್ದಾರೆ. ಮನೆಯಲ್ಲಿ ಮಕ್ಕಳ ಜತೆ ಪಟಾಕಿ ಸಿಡಿಸಿ ಸಂಭ್ರಮಿಸಿದ್ದಾರೆ. ಪೂಜೆಯ ಮತ್ತು ಮಕ್ಕಳ ಜತೆ ಪಟಾಕಿ ಸಿಡಿಸುತ್ತಿರುವ ಫೋಟೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿರುವ ರಾಧಿಕಾ ಪಂಡಿತ್, ಈ ವರ್ಷ ಬೆಳಕು ಹಾಗೂ ಖುಷಿಗಳಿಂದ ತುಂಬಿರಲಿ ಎಂದು ಅಭಿಮಾನಿಗಳಿಗೆ ಶುಭಹಾರೈಸಿದ್ದಾರೆ.