ಕೊರಗಜ್ಜ ಸಿನಿಮಾದ ನಿರ್ದೇಶಕ ಸುಧೀರ್ ಅತ್ತಾವರಗೆ ಮನೆ ಉಡುಗೊರೆ! Sudhir Attavar 
ಸ್ಯಾಂಡಲ್‌ವುಡ್

ಕೊರಗಜ್ಜ ಸಿನಿಮಾದ ನಿರ್ದೇಶಕ ಸುಧೀರ್ ಅತ್ತಾವರಗೆ ಮನೆ ಉಡುಗೊರೆ! Sudhir Attavar

ಪ್ರಮುಖ ಮುಖ್ಯಾಂಶಗಳು

  • ಸುಧೀರ್ ಅತ್ತಾವರ ನಿರ್ದೇಶನದ, ತ್ರಿವಿಕ್ರಮ ಸಪಲ್ಯ ನಿರ್ಮಾಣದ ‘ಕೊರಗಜ್ಜ’ ಶೂಟಿಂಗ್ ಪೂರ್ಣ
  • ಸದ್ಯ ಪೋಸ್ಟ್-ಪ್ರೊಡಕ್ಷನ್ ಹಂತದಲ್ಲಿದ್ದು, ಚಿತ್ರದ 3ಡಿ ಕಾರ್ಯಗಳು ಬಿರುಸುಗೊಂಡಿವೆ
  • ಶೀಘ್ರವೇ ಎಲ್ಲ ಕೆಲಸಗಳು ಮುಗಿಯಲಿದ್ದು, ಆಗಸ್ಟ್​ಗೆ ತೆರೆ ಮೇಲೆ ತರಲು ಚಿತ್ರತಂಡದ ಸಿದ್ಧತೆ
  • ನಿರ್ದೇಶಕನಿಗೆ 1.75 ಕೋಟಿ ರೂ. ಮೌಲ್ಯದ ಫ್ಲ್ಯಾಟ್ ಉಡುಗೊರೆಯಾಗಿ ನೀಡಿದ ನಿರ್ಮಾಪಕ
ಬೆಂಗಳೂರು: ಸುಧೀರ್ ಅತ್ತಾವರ ( Sudhir Attavar ) ನಿರ್ದೇಶನದ, ತ್ರಿವಿಕ್ರಮ ಸಪಲ್ಯ ನಿರ್ಮಾಣದ ‘ಕೊರಗಜ್ಜ’ ಶೂಟಿಂಗ್ ಈಗಾಗಲೇ ಪೂರ್ಣಗೊಂಡಿದ್ದು, ಸದ್ಯ ಪೋಸ್ಟ್-ಪ್ರೊಡಕ್ಷನ್ ಹಂತದಲ್ಲಿದೆ. ಚಿತ್ರದ 3ಡಿ ಕಾರ್ಯಗಳು ಬಿರುಸುಗೊಂಡಿವೆ. ಶೀಘ್ರವೇ ಎಲ್ಲ ಕೆಲಸಗಳು ಮುಗಿಯಲಿದ್ದು, ಆಗಸ್ಟ್​ಗೆ ತೆರೆ ಮೇಲೆ ತರಲು ಚಿತ್ರತಂಡ ಸಿದ್ಧತೆ ನಡೆಸುತ್ತಿದೆ.
ಈಗಾಗಲೇ ಆಡಿಯೋ ರೈಟ್ಸ್ ಜೀ ಮ್ಯೂಸಿಕ್ ತೆಕ್ಕೆಗೆ ಹೋಗಿದ್ದು, ಇನ್ನು ಒಟಿಟಿ, ಟಿವಿ ಹಾಗೂ ಇತರ ಹಕ್ಕುಗಳ ಕುರಿತು ಮಾತುಕತೆ ನಡೆಯುತ್ತಿದೆ. ಹೀಗಿರುವಾಗಲೇ ಸುಧೀರ್ ಅತ್ತಾವರಗೆ ಸಂತಸದ ಸುದ್ದಿ ಸಿಕ್ಕಿದೆ. ಬಿಡುಗಡೆ ಪೂರ್ವವಾಗಿ ಸಿನಿಮಾ ಬಿಜಿನೆಸ್ ಚೆನ್ನಾಗಿ ಆಗುತ್ತಿರುವುದರಿಂದ ಖುಷಿಗೊಂಡಿರುವ ನಿರ್ಮಾಪಕ ತ್ರಿವಿಕ್ರಮ್ ಸಪಲ್ಯ, ನಿರ್ದೇಶಕನಿಗೆ 1.75 ಕೋಟಿ ರೂ. ಮೌಲ್ಯದ ಫ್ಲ್ಯಾಟ್ ಉಡುಗೊರೆಯಾಗಿ ನೀಡಿದ್ದಾರೆ. ಇತ್ತೀಚೆಗಷ್ಟೇ ಗೃಹಪ್ರವೇಶ ನೆರವೇರಿದ್ದು, ಈ ಹಿನ್ನೆಲೆಯಲ್ಲಿ ಸುಧೀರ್ ‘ಕೊರಗಜ್ಜ’ನಿಗೆ ಅಗೆಲು ಸೇವೆ ಅರ್ಪಿಸಿದ್ದಾರೆ.
ಹಿರಿಯ ನಟಿ ಭವ್ಯಾ ಕೊರಗಜ್ಜನಿಗೆ ಸೇವೆಯ ಪೂಜಾ ವಿಧಿ ವಿಧಾನಗಳನ್ನು ನೆರವೇರಿಸಿ, ‘ಕರಾವಳಿ ದೈವದ ಬಗ್ಗೆ ಮೊದಲ ಬಾರಿಗೆ 3ಡಿ ಸಿನಿಮಾ ಮೂಡಿಬರುತ್ತಿರುವುದು ಸಂತೋಷದ ವಿಷಯ. ಮೊದಲು ಸಣ್ಣ ಬಜೆಟ್​ನಲ್ಲಿ ಆರಂಭವಾಗಿದ್ದ ಈ ಚಿತ್ರ ಇದೀಗ ದೊಡ್ಡಮಟ್ಟದಲ್ಲಿ ಮೂಡಿಬರುತ್ತಿದೆ. ಇನ್ನು ತಂಡದವರು ನನ್ನಿಂದ ಅಗೆಲು ಸೇವೆ ಪೂಜೆ ಮಾಡಿಸಿರುವುದು ನನ್ನ ಸೌಭಾಗ್ಯ. ನಿರ್ದೇಶಕ ಸುಧೀರ್ ಅತ್ತಾವರ ಬದ್ಧತೆಯಿಂದ ಈ ಚಿತ್ರಕ್ಕೆ ಕೆಲಸ ಮಾಡಿದ್ದಾರೆ. ಅವರಿಗೆ ಕಥೆಯ ಬಗ್ಗೆ ಆಳವಾದ ಅಧ್ಯಯನ, ಜ್ಞಾನ ಇದೆ. ಸ್ವತಃ ಕಬೀರ್ ಬೇಡಿ ಅವರಂತಹ ದಿಗ್ಗಜ ನಟರೇ ಅವರ ಬಗ್ಗೆ ಮೆಚ್ಚುಗೆ ಮಾತುಗಳನ್ನಾಡಿದ್ದಾರೆ. ‘ಕೊರಗಜ್ಜ’ ಚಿತ್ರದ ಮೂಲಕವೇ ನನಗೆ ಕರಾವಳಿ ದೈವದ ಬಗ್ಗೆ ತಿಳಿಯುವಂತಾಯಿತು’ ಎಂದು ಮಾಹಿತಿ ಹಂಚಿಕೊಂಡರು.
ಈ ಚಿತ್ರದಲ್ಲಿ ಭವ್ಯಾ ಜತೆಗೆ ಕಬೀರ್ ಬೇಡಿ, ಶ್ರುತಿ, ಸಂದೀಪ್ ಸೋಪರ್ಕರ್ ಕಲಾಬಳಗದಲ್ಲಿದ್ದಾರೆ. ಗೋಪಿ ಸುಂದರ್ ಸಂಗೀತ ಚಿತ್ರಕ್ಕಿದೆ. ವಿದ್ಯಾಧರ್ ಶೆಟ್ಟಿ ಕಾರ್ಯಕಾರಿ ನಿರ್ಮಾಪಕರಾಗಿ ಕೆಲಸ ಮಾಡುತ್ತಿದ್ದಾರೆ.

40 ಕೋಟಿ ರೂ ಬಜೆಟ್

ನಿರ್ವಪಕ ತ್ರಿವಿಕ್ರಮ ಸಪಲ್ಯ, ‘ಬಿಡುಗಡೆಗೂ ಮುನ್ನವೇ ಸಿನಿಮಾ ಒಳ್ಳೆಯ ಬಿಜಿನೆಸ್ ಮಾಡುತ್ತಿದೆ. ಇದೇ ಖುಷಿಗೆ ಸುಧೀರ್ ಅತ್ತಾವರಗೆ ಈ ಫ್ಲ್ಯಾಟ್ ಉಡುಗೊರೆಯಾಗಿ ನೀಡಿದ್ದೇವೆ. ಸಿನಿಮಾ ಆರಂಭಕ್ಕಿಂತ ಮುನ್ನ ನಾನು ನಾಸ್ತಿಕನಾಗಿದ್ದೆ. ಆದರೆ, ‘ಕೊರಗಜ್ಜ’ ಬಳಿಕ ನಾನು ಆಸ್ತಿಕನಾಗಿ ಬದಲಾಗಿದ್ದೇನೆ. ಸಿನಿಮಾ 138 ನಿಮಿಷ ಅವಧಿ ಹೊಂದಿದೆ. ಒಂದು ಕೋಟಿ ಬಜೆಟ್​ನಲ್ಲಿ ಆರಂಭವಾದ ಸಿನಿಮಾದ ಒಟ್ಟು ಖರ್ಚು ಇದೀಗ 40 ಕೋಟಿ ರೂ.ಗೆ ತಲುಪಿದೆ’ ಎಂದು ಹೇಳಿದರು.

ಚೀನಿ, ಅಸ್ಸಾಮಿ ಭಾಷೆಗೆ ಡಬ್

‘‘ಕೊರಗಜ್ಜ’ ಚಿತ್ರದ ಶೇ.60ರಷ್ಟು 3ಡಿ ಕಾರ್ಯಗಳು ಪೂರ್ಣಗೊಂಡಿದ್ದು, ಸದ್ಯದಲ್ಲಿ ಸಿನಿಮಾ ರಿಲೀಸ್ ಡೇಟ್ ಘೋಷಿಸಲಾಗುವುದು’ ಎಂದ ಸುಧೀರ್ ಅತ್ತಾವರ, ‘ಈ ಹಿಂದೆ ಮಂಗಳೂರಿನಲ್ಲಿ ಕೋಲ ಸೇವೆ ನೆರವೇರಿಸಿದ್ದೆವು. ಇದೀಗ ಅಗೆಲು ಸೇವೆ ಅರ್ಪಿಸುತ್ತಿದ್ದೇವೆ. ಸಿನಿಮಾ ಆರಂಭವಾಗಿನಿಂದಲೂ ಕೊರಗಜ್ಜನ ಅಭಯ ನಮ್ಮ ಮೇಲಿದೆ. ಚಿತ್ರಕ್ಕೆ 3ಡಿ, ಎಐ, ವಿಎಫ್​ಎಕ್ಸ್ ಬಳಸಿಕೊಳ್ಳಲಾಗಿದೆ. ಹಿಂದಿಯ ‘ತ್ರಿ ಈಡಿಯಟ್ಸ್’ಗೆ ಕೆಲಸ ಮಾಡಿದ್ದ ತಂತ್ರಜ್ಞರೇ ನಮ್ಮ ಚಿತ್ರಕ್ಕೂ ಕೆಲಸ ಮಾಡುತ್ತಿದ್ದಾರೆ. ಅಂತಾರಾಷ್ಟ್ರೀಯ ಬಿಡುಗಡೆ ಸಂಬಂಧ ಬಿಜಿನೆಸ್ ಮಾತುಕತೆ ಕೂಡ ನಡೆಯುತ್ತಿದೆ. ಚೀನಾ ಭಾಷೆಗೂ ಸಿನಿಮಾ ಡಬ್ ಆಗಲಿದ್ದು, ಕನ್ನಡ ಸೇರಿ ಎಂಟು ಭಾಷೆಗಳಲ್ಲಿ ಚಿತ್ರ ಮೂಡಿಬರಲಿದೆ. ನಿರ್ಮಾಪಕರು ಐಷಾರಾಮಿ ಗಿಫ್ಟ್ ನೀಡಿರುವುದು ಖುಷಿ ತಂದಿದೆ’ ಎಂದು ಸಂತಸ ವ್ಯಕ್ತಪಡಿಸಿದರು.