ಬೆಂಗಳೂರು: ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಕನ್ನಡ ಚಿತ್ರರಂಗದ ಹಿರಿಯ ನಟಿ ಲೀಲಾವತಿ ಇಂದು (ಡಿ. 08) ಸಂಜೆ ವಿಧಿವಶರಾಗಿದ್ದಾರೆ.
ಲೀಲಾವತಿ ಅವರಿಗೆ 85 ವರ್ಷ ವಯಸ್ಸಾಗಿತ್ತು. ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಲೀಲಾವತಿ ಅವರು ನೆಲಮಂಗಲದ ಖಾಸಗಿ ಆಸ್ಪತ್ರೆಯಲ್ಲಿ ಇಂದು ಸಂಜೆ ನಿಧನರಾಗಿದ್ದಾರೆ. ಲೀಲಾವತಿ ಅವರು ಇರುವರೆಗೂ ಅವರಿಗಾಗಿಯೇ ಪ್ರತಿಕ್ಷಣ ಬದುಕಿದ್ದ ಪುತ್ರ ವಿನೋದ್ ರಾಜ್ ಅವರನ್ನು ಅಗಲಿ, ಬಾರದ ಲೋಕಕ್ಕೆ ಪಯಣಿಸಿದ್ದಾರೆ.
ಕಳೆದ ಕೆಲವು ತಿಂಗಳುಗಳಿಂದ ಲೀಲಾವತಿ ಅವರು ಆರೋಗ್ಯ ಸ್ಥಿತಿ ಗಂಭೀರವಾಗಿತ್ತು. ಹಾಸಿಗೆ ಹಿಡಿದಿದ್ದರು. ನಟ ಶಿವರಾಜ್ ಕುಮಾರ್, ನಟ ದರ್ಶನ್, ದೊಡ್ಡಣ, ಅರ್ಜುನ್ ಸರ್ಜಾ, ಶ್ರುತಿ, ಸುಧಾರಾಣಿ, ಮಾಳವಿಕಾ ಅವಿನಾಶ್ ಸೇರಿದಂತೆ ಚಿತ್ರರಂಗದ ಗಣ್ಯರು ನೆಲಮಂಗಲದಲ್ಲಿರುವ ಲೀಲಾವತಿ ಅವರ ಮನೆಗೆ ಭೇಟಿ ನೀಡಿ ಆರೋಗ್ಯ ವಿಚಾರಿಸಿದ್ದರು. ಇತ್ತೀಚೆಗಷ್ಟೇ ಲೀಲಾವತಿ ಅವರ ಕನಸಿನ ಪಶುವೈದ್ಯಕೀಯ ಆಸ್ಪತ್ರೆಯನ್ನು ಡಿಸಿಎಂ ಡಿಕೆಶಿ ಅವರು ಉದ್ಘಾಟನೆ ಮಾಡಿದ್ದರು.
1938ರಲ್ಲಿ ಲೀಲಾ ಕಿರಣ್ ಆಗಿ ಜನಿಸಿ ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ ಬಳಿಕ ಲೀಲಾವತಿಯಾಗಿ ಗುರುತಿಸಿಕೊಂಡ ಕನ್ನಡಿಗರ ನೆಚ್ಚಿನ ಲೀಲಮ್ಮ ಕನ್ನಡ, ತಮಿಳು ಹಾಗೂ ತೆಲುಗು ಭಾಷೆಗಳಲ್ಲಿ ನಟಿಸಿದ್ದಾರೆ. 50 ವರ್ಷದ ವೃತ್ತಿ ಜೀವನದಲ್ಲಿ ಸುಮಾರು 600ಕ್ಕೂ ಅಧಿಕ ಸಿನಿಮಾಗಳಲ್ಲಿ ನಟಿಸಿದ್ದಾರೆ. ಕನ್ನಡವೊಂದರಲ್ಲೇ 400ಕ್ಕೂ ಅಧಿಕ ಸಿನಿಮಾಗಳಲ್ಲಿ ತಮ್ಮ ಅಮೋಘ ಅಭಿನಯ ಮೂಲಕ ಅಸಂಖ್ಯಾತ ಅಭಿಮಾನಿ ಬಳಗವನ್ನು ಸೃಷ್ಟಿಸಿಕೊಂಡರು.
ಭಕ್ತ ಕುಂಬಾರ, ಮನ ಮೆಚ್ಚಿದ ಮಡದಿ ಮತ್ತು ಸಂತ ತುಕಾರಾಂ ಸಿನಿಮಾಗಳಲ್ಲಿನ ಅವರ ಅಭಿನಯ ಎಂದಿಗೂ ಮರೆಯುವಂತಿಲ್ಲ. ಇದಿಷ್ಟೇ ಅಲ್ಲದೆ, ಕಣ್ತೆರೆದು ನೋಡು, ಕೈವಾರ ಮಹಾತ್ಮೆ, ಗಾಳಿ ಗೋಪುರ, ಕನ್ಯಾರತ್ನ, ಕುಲವಧು, ವೀರ ಕೇಸರಿ ಸಿನಿಮಾಗಳಲ್ಲಿ ನಟಿಸಿದ್ದಾರೆ. 70 ದಶಕದಲ್ಲಿ ಮುಂಚೂಣಿ ನಾಯಕಿಯರಲ್ಲಿ ಲೀಲಾವತಿ ಕೂಡ ಒಬ್ಬರಾಗಿದ್ದರು.