ಬೆಂಗಳೂರು: ಸಂಚಾರಿ ವಿಜಯ್ ನಟನಾಗಿ ಎಲ್ಲರಿಗೂ ಗೊತ್ತೇ ಇದೆ. ಆದರೆ, ಅವರು ನಟನಾಗಿ ಗುರುತಿಸಿಕೊಳ್ಳುವುದಕ್ಕಿಂತ ಮುನ್ನ, ಅವರು ಕೆಲವು ಕಾಲ ಲೆಕ್ಚರರ್ ಆಗಿದ್ದ ವಿಷಯ ಗೊತ್ತಿದೆಯಾ? ಅಷ್ಟೇ ಅಲ್ಲ, ಅವರೊಬ್ಬ ಇಂಜಿನಿಯರಿಂಗ್ ಪದವೀಧರ ಎಂಬ ವಿಷಯ ಗೊತ್ತಾ?
ವಿಜಯ್ ಪಿಯುಸಿ ಓದುತ್ತಿದ್ದ ಸಂದರ್ಭದಲ್ಲಿ ಅಪ್ಪ ಮತ್ತು ಅಮ್ಮ ಇಬ್ಬರೂ ನಿಧನರಾದರಂತೆ. ಒಂದು ಕಡೆ ಮಾನಸಿಕ ಆಘಾತವಾದರೆ, ಇನ್ನೊಂದು ಕಡೆ ಆರ್ಥಿಕ ಸಂಕಷ್ಟ. ಆ ಸಮಯದಲ್ಲಿ, ಊರು ಬಿಟ್ಟು ಬೆಂಗಳೂರು ಸೇರಿದ ವಿಜಯ್, ಕೆಲವು ತಿಂಗಳ ನಂತರ ತಿಪಟೂರಿಗೆ ಹೋಗಿ ಅಲ್ಲಿ ಪಿಯುಸಿ ಓದಿದರಂತೆ. ಸಿಇಟಿ ಬರೆದು ಇಂಜಿನಿಯರಿಂಗ್ ಕಲಿಯಲು ಬೆಂಗಳೂರಿನ ಬಿಎಂಎಸ್ ಕಾಲೇಜು ಸೇರಿಕೊಂಡರಂತೆ.
ಇಂಜಿನಿಯರಿಂಗ್ ಮುಗಿದರೂ, ನಾಟಕದ ಸೆಳೆತ. ಆದರೆ, ಜೀವನಕ್ಕೊಂದು ಕೆಲಸ ಇಲ್ಲದಿದ್ದರೆ ಕಷ್ಟ ಉಪವಾಸ ಇರಬೇಕಾದೀತು ಎಂದು ಗೊತ್ತಿಲ್ಲದೇನಲ್ಲ. ಈ ಸಂದರ್ಭದಲ್ಲಿ ಏನು ಮಾಡಬೇಕು ಎಂದು ಯೋಚಿಸುತ್ತಿದ್ದಾಗ, ಗೆಳೆಯನೊಬ್ಬ ಐಡಿಯಾ ಕೊಟ್ಟರಂತೆ. ಅದರಂತೆ ಅವರೊಂದು ಕಾಲೇಜಿಗೆ ಲೆಕ್ಚರರ್ ಆಗಿ ಸೇರಿಕೊಂಡರಂತೆ. ಅಲ್ಲಿ ಪಾಠ ಮಾಡಿದ್ದಕ್ಕಿಂತ ಜಾಸ್ತಿ ಮಕ್ಕಳಿಗೆ ಸಾಂಸ್ಕೃತಿಕ ಕಾರ್ಯಕ್ರಮ ಮಾಡಿಸಿದ್ದೇ ಜಾಸ್ತಿ. ಆ ನಂತರ ರಂಗಭೂಮಿಯತ್ತ ವಾಲಿದೆ ಅವರು, ಕ್ರಮೇಣ ಅಧ್ಯಾಪಕ ವೃತ್ತಿಗೆ ರಾಜೀನಾಮೆ ಕೊಟ್ಟ ಅವರು ಖಾಯಮ್ಮಾಗಿ ನಟನೆ ಕಡೆ ವಾಲಿದರಂತೆ.