ಸಿನಿವಾಣಿ

ಅಪಘಾತಕ್ಕೀಡಾದ ನಟ ಸಂಚಾರಿ ವಿಜಯ್ ಸ್ಥಿತಿ ಹೇಗಿದೆ?: ಹೆಲ್ತ್ ಬುಲೆಟಿನ್ ಬಿಡುಗಡೆ ಮಾಡಿದ ಆಸ್ಪತ್ರೆ

ಬೆಂಗಳೂರು: ಕಳೆದ ರಾತ್ರಿ ಸಂಭವಿಸಿದ ಬೈಕ್ ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡಿರುವ ಸ್ಯಾಂಡಲ್‌ವುಡ್ ನಟ ಸಂಚಾರಿ ವಿಜಯ್ ಆರೋಗ್ಯ ಸ್ಥಿತಿ ಕುರಿತು ಅಪೋಲೋ ಆಸ್ಪತ್ರೆ ಭಾನುವಾರ ರಾತ್ರಿ ವಿಸ್ತೃತವಾದ ಹೆಲ್ತ್ ಬುಲೆಟಿನ್ ಬಿಡುಗಡೆ ಮಾಡಿದೆ.

‘‘ಸಂಚಾರಿ ವಿಜಯ್ ಈಗಲೂ ಪ್ರಜ್ಞಾಹೀನ ಸ್ಥಿತಿಯಲ್ಲಿ ಇದ್ದಾರೆ. ಮೆದುಳಿನ ಬಲ ಭಾಗದಲ್ಲಿ ರಕ್ತಸ್ರಾವವಾಗಿದೆ. ಬಿದ್ದ ರಭಸಕ್ಕೆ ಮೆದುಳಿಗೆ ತೀವ್ರ ಪೆಟ್ಟಾಗಿ ರಕ್ತ ಸೋರಿಕೆಯಾಗಿದೆ. ರಾತ್ರಿಯೇ ಮೆದುಳಿನ ಶಸ್ತ್ರಚಿಕಿತ್ಸೆ ಮಾಡಲಾಗಿದೆ.’’ ಎಂದು ಬುಲೆಟಿನ್‌ನಲ್ಲಿ ವಿವರಿಸಲಾಗಿದೆ.

‘‘ನಿನ್ನೆ ರಾತ್ರಿ 11.45ಕ್ಕೆ ಈ ಅಪಘಾತ ಸಂಭವಿಸಿದ್ದು ಕೂಡಲೇ ಬನ್ನೆರುಘಟ್ಟ ರಸ್ತೆಯ ಅಪೋಲೋ ಆಸ್ಪತ್ರೆಯ ಎಮರ್ಜೆನ್ಸಿ ವಿಭಾಗಕ್ಕೆ ವಿಜಯ್ ಅವರನ್ನು ಕರೆತರಲಾಗಿತ್ತು. ಆಗಲೇ ಅವರ ಸ್ಥಿತಿ ಗಂಭೀರವಾಗಿತ್ತು. ಮೆದುಳಿನ ಸಿ.ಟಿ. ಸ್ಕಾೃನ್ ಮಾಡಿದಾಗ, ತೀವ್ರ ಪೆಟ್ಟು ಬಿದ್ದಿರುವುದು ಮತ್ತು ರಕ್ತಸ್ರಾವವಾಗಿರುವುದು ದೃಢಪಟ್ಟಿದೆ.

ಶಸ್ತ್ರ ಚಿಕಿತ್ಸೆ ಮಾಡಿ ರಕ್ತಸ್ರಾವವಾಗಿರುವ ಭಾಗವನ್ನು ಸರಿಪಡಿಸಲಾಗಿದೆ. ಸದ್ಯ ವಿಜಯ್ ಅವರು ಕೋಮಾ ಸ್ಥಿತಿಯಲ್ಲಿದ್ದು, ನ್ಯೂರೋ ಐಸಿಯುನಲ್ಲಿದ್ದಾರೆ. ಫುಲ್ ಲೈಫ್ ಸಪೋರ್ಟ್ ಮುಂದುವರಿದಿದೆ. ಅವರ ಸ್ಥಿತಿ ಗಂಭೀರವಾಗಿಯೇ ಇದೆ’’ ಎಂದು ಅಪೋಲೋ ಆಸ್ಪತ್ರೆಯ ನ್ಯೂರೊಸರ್ಜರಿ ವಿಭಾಗದ ಮುಖ್ಯಸ್ಥ ಡಾ. ಅರುಣ್ ಎಲ್. ನಾಯಕ್ ಅವರು ಹೆಲ್ತ್ ಬುಲೆಟಿನ್‌ನಲ್ಲಿ ತಿಳಿಸಿದ್ದಾರೆ.