ಸಿನಿವಾಣಿ

7M ​ಗೆ ಫಾಲೋವರ್ಸ್​ ಏರಿಸಿಕೊಂಡ ನಾಗಚೈತನ್ಯರನ್ನು ಅನ್​ಫಾಲೋ ಮಾಡಿದ ಮಾಜಿ ಪತ್ನಿ ಸಮಂತಾ!

ನಟಿ ಸಮಂತಾ ರುತ್ ಪ್ರಭು ಹಾಗೂ ನಟ ನಾಗಚೈತನ್ಯ ಜೋಡಿಯ ವಿಚ್ಛೇದನದ ವಿಚಾರ 2021ರಲ್ಲಿ ಅತಿ ದೊಡ್ಡ ಸುದ್ದಿಯಾಗಿತ್ತು. 11 ವರ್ಷದ ತಮ್ಮ ಪ್ರೀತಿಗೆ ಆಂತ್ಯ ಹಾಡಿದ ಈ ಜೋಡಿ ತಮ್ಮ ವಿಚ್ಛೇದನದ ನಿರ್ಧಾರವನ್ನು ಅಭಿಮಾನಿಗಳಿಗೆ ತಿಳಿಸಿದಾಗ ಎಲ್ಲರಿಗೂ ಶಾಕ್ ತಂದಿತ್ತು. ಬಳಿಕ, ಈ ವಿಚಾರದ ಬಗ್ಗೆ ಸಮಂತಾ ಹಾಗೂ ನಾಗಚೈತನ್ಯ ಸಾಕಷ್ಟು ಮೌನವನ್ನೇ ವಹಿಸಿದ್ದಾರೆ. ಆರೋಪ- ಪ್ರತ್ಯಾರೋಪ ಮೊದಲಾದವುಗಳನ್ನು ನಡೆಸದೆ ಈ ಜೋಡಿ ಮಾಧ್ಯಮಗಳ ಮುಂದೆ ಗೌರವದಿಂದ ನಡೆದುಕೊಳ್ಳುತ್ತಿದ್ದಾರೆ.
ಆದರೆ, ಸಮಂತಾ ತಮ್ಮ ಸಂಬಂಧದ ನೆನಪಿಗಾಗಿ ಯಾವುದನ್ನೂ ಉಳಿಸಿಕೊಳ್ಳಲು ಇಷ್ಟಪಡುತ್ತಿಲ್ಲ ಎಂಬ ಸುದ್ದಿಗಳು ಈಗ ಕೇಳಬರುತ್ತಿವೆ. ಈಗಾಗಲೇ, ಮದುವೆಯ ಸಮಯದಲ್ಲಿ ನಾಗಚೈತನ್ಯ ಅವರ ಕುಟುಂಬ ತಮಗೆ ನೀಡಿದ ಎಲ್ಲಾ ವಸ್ತುಗಳನ್ನು ಹಿಂದಿರುಗಿಸಿದ್ದು, ಇದೀಗ ನಟಿ ಸಮಂತಾ ಮಾಜಿ ಪತಿ ನಾಗಚೈತನ್ಯರನ್ನು ಇನ್​ಸ್ಟಾಗ್ರಾಂನಲ್ಲೂ ಅನ್​ಫಾಲೋ ಮಾಡಿದ್ದಾರೆ.
ಅಂದಹಾಗೆ, ನಾಗಚೈತನ್ಯ ಅವರು ಮಾ. 21 ರಂದು ಇನ್​ಸ್ಟಾಗ್ರಾಂನಲ್ಲಿ 7 ಮಿಲಿಯನ್ ಅನುಯಾಯಿಗಳನ್ನು ಗಳಿಸಿದ್ದರು. ಅದರ ನಂತರವೇ, ನಟಿ ಸಮಂತಾ ಮಾಜಿ ಪತಿಯನ್ನು ಅನ್​ಫಾಲೋ ಮಾಡಿದ್ದಾರೆ ಎನ್ನಲಾಗಿದೆ. ಇನ್ನು, ಕೆಲ ಸಮಯದ ಹಿಂದೆ ನಟಿ ಸಮಂತಾ ಅವರು ನಾಗಚೈತನ್ಯರೊಂದಿಗಿದ್ದ ಫೋಟೋಗಳನ್ನು ತಮ್ಮ ಇನ್​ಸ್ಟಾಗ್ರಾಂನಿಂದ ಡಿಲೀಟ್ ಮಾಡಿದ್ದರು. ಇದೀಗ, ಅನ್​ಫಾಲೋ ಮಾಡಿದ್ದಾರೆ.
ಹೀಗಿದ್ದರೂ, ನಟ ನಾಗಚೈತನ್ಯ ಮಾತ್ರ ಮಾಜಿ ಪತ್ನಿ ಸಮಂತಾರನ್ನು ಇನ್​ಸ್ಟಾಗ್ರಾಂನಲ್ಲಿ ಇನ್ನೂ ಫಾಲೋ ಮಾಡುತ್ತಿದ್ದಾರೆ. ಸದ್ಯ, ಈ ವಿಚಾರ ಅಭಿಮಾನಿಗಳ ನಿದ್ದೆಗಡಿಸಿದೆ ಎಂದರೆ ತಪ್ಪಾಗುವುದಿಲ್ಲ. ಪತಿಯ ಜತೆಗೆ ಯಾವುದೇ ಸಂಬಂಧ ಬೇಡ ಎಂಬಂತೆ ಸಮಂತಾ ವರ್ತಿಸುತ್ತಿದ್ದರೆ, ನಾಗಚೈತನ್ಯ ಮಾತ್ರ ಸಮಂತಾರನ್ನು ಅಂಟಿಕೊಂಡೆ ಇದ್ದಾರೆ ಎಂಬ ಮಾತುಗಳು ಸಿನಿ ವಲಯದಲ್ಲಿ ಕೇಳಿಬರುತ್ತಿವೆ.