ಲಾಕ್‍ಡೌನ್ ಸಮಯದಿಂದ ಅದ್ಯಾರಿಗೆ, ಎಷ್ಟು ಸಹಾಯವಾಯಿತೋ ಗೊತ್ತಿಲ್ಲ. ಆದರೆ, ಟಾಲಿವುಡ್ ನಟಿ ಸಮಂತಾ ಅಕ್ಕಿನೇನಿಗೆ ಮಾತ್ರ ಸಿಕ್ಕಾಪಟ್ಟೆ ಸಹಾಯವಾಯಿತು ಎಂದು ಹೇಳಲಾಗುತ್ತಿದೆ. ಮೊದಲ ಎರಡು ತಿಂಗಳುಗಳ ಕಾಲ ಅಕ್ಷರಶಃ ನಾಪತ್ತೆಯಾಗಿದ್ದ ಸಮಂತಾ, ಆ ನಂತರ ಸೋಷಿಯಲ್ ಮೀಡಿಯಾದ ಹೆಚ್ಚು ಸಕ್ರಿಯರಾದರು. ಯೋಗ, ಕೃಷಿ ಅಂತ ತಮ್ಮ ಫೋಟೋಗಳನ್ನು ಅಭಿಮಾನಿಗಳೊಂದಿಗೆ ಹಂಚಿಕೊಳ್ಳುತ್ತಲೇ ಇದ್ದರು.
ಹೀಗೆ ಕಳೆದ ಐದು ತಿಂಗಳುಗಳಿಂದ ಮನೆಯಲ್ಲೇ ಇದ್ದ ಸಮಂತಾ, ಈಗ ಮೊದಲ ಬಾರಿಗೆ ಕ್ಯಾಮೆರಾ ಮುಂದೆ ನಿಂತಿದ್ದಾರೆ. ಸಮಂತಾ ಬಣ್ಣ ಹಚ್ಚಿದರು, ಕ್ಯಾಮೆರಾ ಮುಂದೆ ನಿಂತರು ಎಂದರೆ ಯಾವ ಚಿತ್ರ, ಏನು ಕಥೆ, ಯಾರು ಹೀರೋ ಎಂಬ ಹಲವು ಪ್ರಶ್ನೆಗಳು ಬರುವುದು ಸಹಜ. ಸಮಂತಾ ಮುಂದೆ ಹಲವು ಅವಕಾಶಗಳಿದ್ದರೂ, ಅವರು ದಸರಾ ಹಬ್ಬ ಕಳೆಯುವವರೆಗೂ ಸಿನಿಮಾ ಚಿತ್ರೀಕರಣದಲ್ಲಿ ಭಾಗವಹಿಸಬಾರದು ಎಂದು ತೀರ್ಮಾನಿಸಿದ್ದಾರಂತೆ. ಕರೊನಾ ಹಾವಳಿ ಕೊಂಚ ತಗ್ಗಿದ ನಂತರ ಮತ್ತೆ ಚಿತ್ರದಲ್ಲಿ ನಟಿಸಬೇಕು ಎಂದು ನಿರ್ಧರಿಸಿದ್ದಾರಂತೆ.
ಹಾಗಾದರೆ, ಅವರು ಕ್ಯಾಮೆರಾ ಮುಂದೆ ನಿಂತು ಯಾತಕ್ಕಾಗಿ ಎಂಬ ಪ್ರಶ್ನೆ ಇನ್ನಷ್ಟು ಹೆಚ್ಚಾಗಬಹುದು. ಸಮಂತಾ ಹೊಸ ಆ್ಯಡ್‍ವೊಂದರರಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಮಿಂಟ್ರಾ ಫ್ಯಾಶನ್‍ನ ಜಾಹೀರಾತಿನಲ್ಲಿ ಕಾಣಿಸಿಕೊಳ್ಳುವುದಕ್ಕೆ ಸಮಂತಾ ಒಪ್ಪಿಕೊಂಡಿದ್ದು, ಈಗ ಅದರ ಚಿತ್ರೀಕರಣ ನಡೆಯುತ್ತಿದೆ. ಇನ್ನು ಕೆಲವೇ ದಿನಗಳಲ್ಲಿ ಆ ಜಾಹೀರಾತು ಟಿವಿಯಲ್ಲಿ ಬರಲಿದೆ.
ಇದಕ್ಕೂ ಮುನ್ನ ಸಮಂತಾ ಅವರ ಮಾವ ನಾಗಾರ್ಜುನ, `ಬಿಗ್ ಬಾಸ್'ನ ಪ್ರೋಮೋದ ಶೂಟಿಂಗ್‍ನಲ್ಲಿ ಭಾಗವಹಿಸಿದ್ದರು. ಈಗ ಸಮಂತಾ ಸಹ ಕ್ಯಾಮೆರಾ ಎದುರಿಸುತ್ತಿದ್ದಾರೆ. ಹಾಗೆ ನೋಡಿದರೆ, ಸಮಂತಾ ಕ್ಯಾಮೆರಾ ಎದುರಿಸಿ ಆರು ತಿಂಗಳ ಮೇಲಾಗಿದೆ ಎಂದು ಹೇಳಲಾಗುತ್ತಿದೆ. ಈ ವರ್ಷದ ಆರಂಭದಲ್ಲಿ ಅವರು `ದಿ ಫ್ಯಾಮಿಲಿ ಮ್ಯಾನ್'ನ ಎರಡನೆಯ ಸೀಸನ್‍ನಲ್ಲಿ ನಟಿಸಿದ್ದರು. ಆ ನಂತರ ಲಾಕ್‍ಡೌನ್ ಘೋಷಣೆಯಾಗಿ, ಅವರ ಪ್ಲಾನ್‍ಗಳೆಲ್ಲಾ ತಲೆಕೆಳಗಾದವು.
ಈಗ `ಗೇಮ್ ಓವರ್' ಮತ್ತು ವಿಘ್ನೇಶ್ ಶಿವನ್ ನಿರ್ದೇಶನದ ಚಿತ್ರಗಳನ್ನು ಸಮಂತಾ ಒಪ್ಪಿಕೊಂಡಿದ್ದು, ದಸರಾ ಹಬ್ಬದ ನಂತರ ಚಿತ್ರೀಕರಣದಲ್ಲಿ ಭಾಗವಹಿಸಲಿದ್ದಾರೆ.