ಸಿನಿವಾಣಿ

ನಮ್ಮಿಬ್ಬರ ದೊಡ್ಡತನದಿಂದಲೇ ಅವರಿಗೆ ಹಿಟ್​ ಸಿಕ್ಕಿದ್ದು ... ಸಲ್ಮಾನ್​ ಹೇಳಿದ್ದು ಯಾರ ಬಗ್ಗೆ?

chetannadiger

ಮುಂಬೈ: ಸಲ್ಮಾನ್​ ಆಗಾಗ ಒಂದಲ್ಲ ಒಂದು ಬಾಂಬ್​ ಸಿಡಿಸುತ್ತಲೇ ಇರುತ್ತಾರೆ. ಇತ್ತೀಚೆಗಷ್ಟೇ, ಸ್ವಯಂಘೋಷಿತ ನಂಬರ್​ ಒನ್​ ಚಿತ್ರ ವಿಮರ್ಶಕ ಕಮಾಲ್​ ಆರ್​ ಖಾನ್​ ಅಲಿಯಾಸ್​ ಕೆಆರ್​ಕೆ ಮೇಲೆ ಮಾನನಷ್ಟ ಮೊಕದ್ದಮೆ ಹಾಕಿದ್ದರು. ಈಗ ಅವರು, ತಮ್ಮ ದೊಡ್ಡತನದಿಂದ ಸ್ಟಾರ್​ ನಟರೊಬ್ಬರಿಗೆ ಹಿಟ್​ ಸಿಕ್ಕಿದ್ದು ಎಂದು ಹೇಳಿಕೊಂಡಿದ್ದಾರೆ.

ಅಂದಹಾಗೆ, ಸಲ್ಮಾನ್​ ಖಾನ್​ ಹೀಗೆ ಹೇಳಿದ್ದು ಬಾಲಿವುಡ್​ ನಟ ಜಾನ್​ ಅಬ್ರಹಾಂ ಬಗ್ಗೆ. ಜಾನ್​ ಅಬ್ರಹಾಂ ವೃತ್ತಿಜೀವನಕ್ಕೆ ದೊಡ್ಡ ಹಿಟ್​ ಕೊಟ್ಟ ಚಿತ್ರವೆಂದರೆ ಅದು 'ನ್ಯೂಯಾರ್ಕ್​'. ಆ ಚಿತ್ರ ಸಾಧ್ಯವಾಗುವುದಕ್ಕೆ ಸಲ್ಮಾನ್​ ಮತ್ತು ಕತ್ರೀನಾ ಸಹ ಕಾರಣವಂತೆ. ಅದು ಹೇಗೆ ಎಂದು ಅವರೇ ಇತ್ತೀಚೆಗೆ ಸಂದರ್ಶನವೊಂದರಲ್ಲಿ ಹೇಳಿಕೊಂಡಿದ್ದಾರೆ.

ಈ ಕುರಿತು ಮಾತನಾಡಿರುವ ಅವರು, 'ಜಾನ್​ ಅಬ್ರಹಾಂ ಮತ್ತು ಕತ್ರೀನಾ ಇಬ್ಬರೂ 'ಸಾಯ' ಎಂಬ ಚಿತ್ರ ಮಾಡಬೇಕಿತ್ತು. ಆದರೆ, ಆ ಚಿತ್ರದಿಂದ ಕತ್ರೀನಾ ಅವರನ್ನು ಕಿತ್ತುಹಾಕಿಸಿ, ತಾರಾ ಶರ್ಮಗೆ ಜಾನ್​ ಅವಕಾಶ ಕೊಡಿಸಿದ್ದರು. ಈ ಬಗ್ಗೆ ಕತ್ರೀನಾ ನನ್ನ ಹತ್ತಿರ ಹೇಳಿಕೊಂಡು, ಬೇಸರ ಮಾಡಿಕೊಂಡಿದ್ದರು. ತಲೆ ಕೆಡಿಸಿಕೊಳ್ಳಬೇಡ, ಮುಂದೊಂದು ದಿನ ಪರಿಸ್ಥಿತಿ ಖಂಡಿತಾ ಎಲ್ಲವೂ ಸರಿ ಹೋಗುತ್ತದೆ ಎಂದು ಆಕೆಗೆ ಧೈರ್ಯ ಹೇಳಿದ್ದೆ' ಎಂದಿದ್ದಾರೆ ಸಲ್ಮಾನ್​.

ಆ ನಂತರ ಕತ್ರೀನಾ ಮತ್ತು ಜಾನ್​ ಮತ್ತೊಮ್ಮೆ ಇನ್ನೊಂದು ಚಿತ್ರದಲ್ಲಿ ನಟಿಸುವ ಅವಕಾಶ ಸಿಕ್ಕಿತಂತೆ. ಅದೇ 'ನ್ಯೂಯಾರ್ಕ್​'. ಹಿಂದೊಮ್ಮೆ ತಮ್ಮನ್ನು ಚಿತ್ರದಿಂದ ಗೇಟ್​ಪಾಸ್​ ಕೊಡಿಸಿದ್ದಕ್ಕೆ ಜಾನ್​ ಜತೆಗೆ ನಟಿಸುವುದಕ್ಕೆ ಕತ್ರೀನಾ ಹಿಂದೇಟು ಹಾಕಿದರಂತೆ. ಈ ಸಂದರ್ಭದಲ್ಲಿ ಅವರಿಗೆ ಹಾಗೆ ಮಾಡಬಾರದು ಎಂದು ಹೇಳಿ ಚಿತ್ರದಲ್ಲಿ ನಟಿಸಿವುದಕ್ಕೆ ಮನವೊಲಿಸಿದರಂತೆ ಸಲ್ಮಾನ್​.

'ಆ ಚಿತ್ರದಲ್ಲಿ ನಟಿಸುವುದಕ್ಕೆ ಕತ್ರೀನಾಗೆ ಆಸಕ್ತಿ ಇರಲಿಲ್ಲ. ಚಿತ್ರದಲ್ಲಿ ಯಾರೇ ಇರಲಿ, ನೀನು ಚಿತ್ರ ಒಪ್ಪಬೇಕಾಗಿರುವುದು ಕಥೆ ಮತ್ತು ನಿರ್ದೇಶಕರಿಗಾಗಿ. ಹಾಗಾಗಿ, ಹೀರೋ ಯಾರೇ ಇರಲಿ, ಚಿತ್ರ ಇಷ್ಟವಾದರೆ ನಿನ್ನ ಪಾಡಿಗೆ ನಟಿಸು ಎಂದು ಹೇಳಿದೆ. ಕೊನೆಗೆ ಕತ್ರೀನಾ ಆ ಚಿತ್ರದಲ್ಲಿ ನಟಿಸುವುದಕ್ಕೆ ಒಪ್ಪಿಕೊಂಡಳು. ಆ ಚಿತ್ರ ದೊಡ್ಡ ಹಿಟ್​ ಆಯಿತು. ನನ್ನ ಮತ್ತು ಕತ್ರೀನಾಳ ದೊಡ್ಡತನದಿಂದ ಜಾನ್​ ಅಬ್ರಹಾಂಗೆ ದೊಡ್ಡ ಹಿಟ್​ ಸಿಕ್ಕಿತು' ಎಂದು ಸಲ್ಮಾನ್​ ಹೇಳಿದ್ದಾರೆ.