ಮುಂಬೈ: ಸಲ್ಮಾನ್ ಖಾನ್ ಜನ್ಮದಿನವೆಂದರೆ, ಅಭಿಮಾನಿಗಳ ಪಾಲಿನ ಹಬ್ಬವದು. ಆದರೆ, ಈ ಸಲ ಕೋವಿಡ್ ಹಿನ್ನೆಲೆಯಲ್ಲಿ ಅದ್ದೂರಿ ಜನ್ಮದಿನ ಆಚರಣೆಗೆ ಸಲ್ಮಾನ್ ಬ್ರೇಕ್ ಹಾಕಿದ್ದಾರೆ. ಸರಳವಾಗಿ ಕುಟುಂಬ ಮತ್ತು ಆಪ್ತರೊಂದಿಗೆ 55ನೇ ಬರ್ತ್ಡೇ ಆಚರಿಸಿಕೊಂಡಿದ್ದಾರೆ. ಅಭಿಮಾನಿಗಳಿಗೆ ಮನೆ ಬಳಿ ಬರಬೇಡಿ, ಇದ್ದಲ್ಲಿಂದಲೇ ಆಶೀರ್ವದಿಸಿ ಎಂದೂ ಸಲ್ಮಾನ್ ಕೋರಿದ್ದಾರೆ.
ಮುಂಬೈ ಹೊರವಲಯದಲ್ಲಿರುವ ಪಾನ್ವೆಲ್ ಫಾರ್ಮ್ಹೌಸ್ನಲ್ಲಿ ಶನಿವಾರ ರಾತ್ರಿ ವೇಳೆಗೆ ಸಲ್ಮಾನ್ ಜನ್ಮದಿನ ಆಚರಿಸಿಕೊಂಡಿದ್ದಾರೆ. ತಂದೆ ಸಲೀಮ್ ಖಾನ್, ಅಲ್ವಿರಾ ಅಗ್ನಿಹೋತ್ರಿ, ಸುನೀಲ್ ಗ್ರೋವರ್, ಸೂರಜ್ ಪಾಂಚೋಲಿ ಸೇರಿ ಹಲವು ಬಾಲಿವುಡ್ ಸ್ನೇಹಿತರು ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಸದ್ಯ ‘ರಾಧೆ’ ಸಿನಿಮಾ ಶೂಟಿಂಗ್ನಲ್ಲಿ ಬಿಜಿಯಾಗಿರುವ ಸಲ್ಮಾನ್ ಖಾನ್, ಇದರ ಜತೆಗೆ ಆಯುಷ್ ಶರ್ಮಾ ಅವರ ಅಂತಿಮ್ ಚಿತ್ರದಲ್ಲಿಯೂ ವಿಶೇಷ ಪಾತ್ರದಲ್ಲಿ ನಟಿಸುತ್ತಿದ್ದಾರೆ. ಇತ್ತೀಚೆಗಷ್ಟೇ ಆ ಚಿತ್ರದ ಟೀಸರ್ ಬಿಡುಗಡೆ ಆಗಿದ್ದು, ಎಲ್ಲೆಡೆ ವೈರಲ್ ಆಗಿದೆ.
ಇನ್ನು ಸಲ್ಮಾನ್ ಖಾನ್ ಜನ್ಮದಿನದ ಪ್ರಯುಕ್ತ ಅವರ ನಟನೆಯ ಸಿನಿಮಾಗಳಿಂದ ಯಾವುದೇ ವಿಶೇಷ ಪೋಸ್ಟರ್ ಆಗಲಿ, ಟೀಸರ್ಗಳಾಗಲಿ ಹೊರಬಂದಿಲ್ಲ. ಬದಲಿಗೆ ಶೀಘ್ರದಲ್ಲಿ ರಾಧೆ ಚಿತ್ರದ ಬಿಡುಗಡೆ ದಿನಾಂಕವನ್ನು ಘೋಷಣೆ ಮಾಡಲಿದ್ದೇವೆ ಎಂದಿದ್ದಾರೆ. ಇದು ಅಭಿಮಾನಿಗಳಿಗೆ ಕೊಂಚ ನಿರಾಸೆಯುಂಟು ಮಾಡಿದೆ. (ಏಜೆನ್ಸೀಸ್)