ಸಿನಿವಾಣಿ

ನಾನೇನು ನಿಮ್ಮ ದುಡ್ಡು ಕದ್ದಿಲ್ಲ ... ಅಭಿಮಾನಿಯ ಬಾಯಿ ಮುಚ್ಚಿಸಿದ ಸಲ್ಮಾನ್​

ಮುಂಬೈ: ಸೋಷಿಯಲ್​ ಮೀಡಿಯಾದಲ್ಲಿ ಇದ್ದೂ ಇಲ್ಲದಂತೆ ಇರುವವರು ಸಲ್ಮಾನ್​ ಖಾನ್​. ಎಷ್ಟು ಬೇಕೋ ಅಷ್ಟೇ ಕಾಣಿಸಿಕೊಳ್ಳುವ ಸಲ್ಮಾನ್​ಗೆ ಸೋಷಿಯಲ್​ ಮೀಡಿಯಾದಲ್ಲಿ ಯಾವಾಗಲೂ ದೊಡ್ಡ ಮಟ್ಟದಲ್ಲಿ ಟ್ರೋಲ್​ ಮಾಡಲಾಗುತ್ತದೆ. ಆದರೂ ಅವಕ್ಕೆಲ್ಲ ಸಲ್ಮಾನ್ ಪ್ರತಿಕ್ರಿಯಿಸುವುದಕ್ಕೆ ಹೋಗುವುದಿಲ್ಲ. ಈಗ ಅವರು ಕಾರ್ಯಕ್ರಮವೊಂದರಲ್ಲಿ ತಮ್ಮ ಬಗ್ಗೆ ಆಗುವ ಟ್ರೋಲ್​ಗಳಿಗೆ ಉತ್ತರ ಕೊಟ್ಟಿದ್ದಾರೆ.

ಸಲ್ಮಾನ್​ ಸಹೋದರ ಅರ್ಬಾಜ್​ ಖಾನ್​, 'ಪಿಂಚ್​ 2' ಎನ್ನುವ ಈ ಕಾರ್ಯಕ್ರಮದಲ್ಲಿ ಬಾಲಿವುಡ್​ನ ಹಲವು ಸೆಲೆಬ್ರಿಟಿಗಳು ಕಾಣಿಸಿಕೊಂಡು, ತಮ್ಮ ಕುರಿತಾದ ಟ್ರೋಲ್​ಗಳಿಗೆ ಉತ್ತರ ಕೊಡುತ್ತಾರೆ. ಈ ಕಾರ್ಯಕ್ರಮದ ವಿಶೇಷ ಎಪಿಸೋಡ್​ನಲ್ಲಿ ಇತ್ತೀಚೆಗೆ ಸಲ್ಮಾನ್​ ಖಾನ್ ಸಹ ಕಾಣಿಸಿಕೊಂಡಿದ್ದಾರೆ. ತಮ್ಮ ಕುರಿತು ಇಷ್ಟ ಬಂದಂತೆ ಮಾತನಾಡುವ ಜನರಿಗೆ, ತಮ್ಮದೇ ರೀತಿಯಲ್ಲಿ ಉತ್ತರ ಕೊಟ್ಟಿದ್ದಾರೆ.

ಅದರಲ್ಲೂ 'ರಾಧೇ' ಚಿತ್ರ ಬಿಡುಗಡೆಯಾಗಿ, ಪ್ರೇಕ್ಷಕರಿಂದ ಕೆಟ್ಟ ವಿಮರ್ಶೆಗಳು ಬಂದಾಗ, ಕೆಲವರು ಚಿತ್ರ ಚೆನ್ನಾಗಿಲ್ಲದಿರುವುದರಿಂದ ತಮ್ಮ ದುಡ್ಡು ವಾಪಸ್ಸು ಕೊಡುವುದಕ್ಕೆ ಸಲ್ಮಾನ್​ಗೆ ಉತ್ತರಿಸಿದ್ದರು. ಈ ಕುರಿತು ಉತ್ತರಿಸಿರುವ ಸಲ್ಮಾನ್​, 'ನಾನ್ಯಾಕೆ ನಿಮಗೆ ದುಡ್ಡು ಕೊಡಬೇಕು. ನಾನು ನಿಮ್ಮ ದುಡ್ಡನ್ನೇನೂ ಕದ್ದಿಲ್ಲ. ಬಹುಶಃ ನಿಮ್ಮ ಹೃದಯವನ್ನು ಕದ್ದಿರಬಹುದು' ಎಂದು ಹೇಳಿಕೊಂಡಿದ್ದಾರೆ.

ಇನ್ನು, ನಿಮಗೆ ಅಭಿನಯ ಬರುವುದಿಲ್ಲ, ಬರೀ ಶೋಆಫ್​ ಮಾಡುತ್ತೀರಿ ಎಂದು ಪ್ರೇಕ್ಷಕರೊಬ್ಬರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಇದಕ್ಕೆ ಉತ್ತರಿಸಿರುವ ಸಲ್ಮಾನ್​. 'ಆಯ್ತು, ನೀವು ಮಾಡಿ. ನಿಮಗೆ ಯಾರು ಬೇಡ ಅಂದಿದ್ದು? ಶೋಆಫ್​ ಮಾಡುವುದಕ್ಕೆ ಧೈರ್ಯಬೇಕು' ಎಂದು ಹೇಳಿದ್ದಾರೆ.

ಸದ್ಯ 'ಟೈಗರ್​ 3' ಚಿತ್ರದಲ್ಲಿ ಅಭಿನಯಿಸುತ್ತಿರುವ ಸಲ್ಮಾನ್​, ಮುಂದಿನ ದಿನಗಳಲ್ಲಿ 'ಭಾಯ್​ಜಾನ್​', 'ಕಿಕ್​ 2' ಮುಂತಾದ ಚಿತ್ರಗಳಲ್ಲೂ ನಟಿಸುತ್ತಿದ್ದಾರೆ. ಇದಲ್ಲದೆ, ಆಮೀರ್​ ಖಾನ್​ ಅಭಿನಯದ 'ಲಾಲ್​ ಸಿಂಗ್​ ಚಡ್ಡಾ' ಮತ್ತು ಶಾರೂಖ್​ ಖಾನ್​ ಅಭಿನಯದ 'ಪಠಾಣ್​' ಚಿತ್ರಗಳಲ್ಲೂ ಅವರು ಅತಿಥಿ ಪಾತ್ರಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.