ಸಿನಿವಾಣಿ

ನಟ ಸಲ್ಮಾನ್​ ಖಾನ್​ಗೆ ಹಾವಿನ ಕಡಿತ; ಭಾಯ್​ಜಾನ್​ನಿಂದ ಜನರಿಗೂ ಭರ್ಜರಿ ಕಡಿತ ಕಡಿತ..

ಮುಂಬೈ: ಬಾಲಿವುಡ್ ನಟ ಸಲ್ಮಾನ್​ ಖಾನ್​ ನಿನ್ನೆಯಷ್ಟೇ ಹಾವಿನ ಕಡಿತಕ್ಕೊಳಗಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಆದರೆ ಅದಾಗಿ ಒಂದೇ ದಿನಕ್ಕೆ ಅವರು ಜನರಿಗೆ ಭರ್ಜರಿ ಕಡಿತದ ಸುದ್ದಿ ನೀಡಿದ್ದಾರೆ!

ಹೌದು.. ವರ್ಷಾಂತ್ಯವೆಂದರೆ ಎಲ್ಲೆಂದರಲ್ಲಿ ಕಡಿತದ್ದೇ ಸುದ್ದಿ. ಬಹುತೇಕ ಮಾಲ್​ಗಳಲ್ಲಿ, ಬಹಳಷ್ಟು ಮಳಿಗೆಗಳಲ್ಲಿ ಕೇಳಿಬರುವ ಈ ಕಡಿತದ ಸುದ್ದಿಯನ್ನೇ ನಟ ಸಲ್ಮಾನ್​ ಖಾನ್​ ಕೂಡ ನೀಡಿದ್ದಾರೆ. ಹಾವಿನ ಕಡಿತದ ನಡುವೆ ಇದ್ಯಾವುದು ಬೇರೆ ಕಡಿತ ಎಂದು ಯೋಚಿಸುವ ಅಗತ್ಯವಿಲ್ಲ. ಇದು ಡಿಸ್ಕೌಂಟ್​, ಅರ್ಥಾತ್ ದರಕಡಿತದ ವಿಷಯ.

ಸಲ್ಮಾನ್​ ಖಾನ್​ ಹಾವಿನ ಕಡಿತದಿಂದ ಆಸ್ಪತ್ರೆಯಲ್ಲಿ ಫ್ಲ್ಯಾಟ್ ಆಗಿ ಮಲಗಿದ್ದರೂ ತಮ್ಮ ಗ್ರಾಹಕರಿಗೆ ಫ್ಲ್ಯಾಟ್ ಡಿಸ್ಕೌಂಟ್ ಕುರಿತು ಮಾಹಿತಿ ನೀಡುವುದನ್ನು ತಪ್ಪಿಸಿಲ್ಲ. ಅವರು ತಮ್ಮದೇ ಬ್ರ್ಯಾಂಡ್ ಆಗಿರುವ 'ಬಿಯಿಂಗ್ ಹ್ಯೂಮನ್​' ಕುರಿತು ಆಸ್ಪತ್ರೆಯಿಂದಲೇ ಮಾರ್ಕೆಟಿಂಗ್ ಮಾಡಿದ್ದಾರೆ.

ತಾವು ಆಸ್ಪತ್ರೆಯಲ್ಲಿರುವುದು ಬಹುತೇಕ ಎಲ್ಲರಿಗೂ ಗೊತ್ತಿದ್ದರೂ ನೀವೆಲ್ಲಿದ್ದೀರಿ ಎಂದು ಸಲ್ಮಾನ್​ ಖಾನ್​ ಸಾರ್ವಜನಿಕರನ್ನು ಕೇಳಿದ್ದಾರೆ. 'ಎಲ್ಲರೂ ಬಿಯಿಂಗ್ ಹ್ಯೂಮನ್​ನಲ್ಲಿ ಫ್ಲ್ಯಾಟ್​ 50% ಡಿಸ್ಕೌಂಟ್​​ನಲ್ಲಿ ಶಾಪಿಂಗ್ ಮಾಡುತ್ತಿದ್ದಾರೆ, ನೀವೆಲ್ಲಿದ್ದೀರಿ? ನೀವೂ ಬನ್ನಿ, ನಿಮ್ಮ ನಿರೀಕ್ಷೆಯಲ್ಲಿದ್ದೇವೆ. ನಮ್ಮ ಹತ್ತಿರದ ಮಳಿಗೆ ಧಾವಿಸಿ ಅಥವಾ ಆನ್​ಲೈನ್​ನಲ್ಲೇ ಶಾಪಿಂಗ್ ಮಾಡಿ' ಎಂದು ಬಿಯಿಂಗ್ ಹ್ಯೂಮನ್​ ಅಂತರ್ಜಾಲ ತಾಣದ ಲಿಂಕ್​ ಕೂಡ ಶೇರ್ ಮಾಡಿಕೊಂಡಿದ್ದಾರೆ.