ಸಿನಿವಾಣಿ

ಸಲಾರ್ ಮತ್ತೊಮ್ಮೆ ಮುಂದಕ್ಕೆ?

Bengaluru - General - Rama Kishan K V

ಪ್ರಭಾಸ್ ನಟಿಸುತ್ತಿರುವ ‘ಆದಿಪುರುಷ್’ ಚಿತ್ರದ ಬಿಡುಗಡೆಯನ್ನು ಮುಂದೂಡಿರುವ ಚಿತ್ರತಂಡ ಇತ್ತೀಚೆಗಷ್ಟೆ ಹೊಸ ರಿಲೀಸ್ ಡೇಟ್ ಘೋಷಣೆ ಮಾಡಿತ್ತು. ಆ ಪ್ರಕಾರ 2023ರ ಜನವರಿ 12ರ ಬದಲು ‘ಆದಿಪುರುಷ್’ ಈಗ ಜೂನ್ 16ರಂದು ಬಿಡುಗಡೆಯಾಗಲಿದೆ. ಅದರ ಬೆನ್ನಲ್ಲೇ ಪ್ರಭಾಸ್ ನಟಿಸುತ್ತಿರುವ ಮತ್ತೊಂದು ಚಿತ್ರ ‘ಸಲಾರ್’ ಕೂಡ ಮುಂದೂಡಲ್ಪಟ್ಟಿದೆ ಎಂದು ಹೇಳಲಾಗುತ್ತಿದೆ. ‘ಕೆಜಿಎಫ್’ ಜೋಡಿ ಪ್ರಶಾಂತ್ ನೀಲ್ ನಿರ್ದೇಶಿಸುತ್ತಿರುವ, ವಿಜಯ್ ಕಿರಗಂದೂರು ನಿರ್ವಿುಸುತ್ತಿರುವ ‘ಸಲಾರ್’ ಪೋಸ್ಟ್​ಪೋನ್ ಆಗಿರುವ ಬಗ್ಗೆ ಸದ್ಯ ಟಾಲಿವುಡ್ ಅಂಗಳದಲ್ಲಿ ಸುದ್ದಿ ಹರಿದಾಡುತ್ತಿದೆ.

ಈ ಹಿಂದೆ ‘ಸಲಾರ್’ 2023ರ ಏಪ್ರಿಲ್ 14ರಂದು ಬಿಡುಗಡೆಯಾಗಲಿದೆ ಎಂದು ಘೋಷಣೆಯಾಗಿತ್ತು. ಆದರೆ ಕಾರಣಾಂತರಗಳಿಂದ ಚಿತ್ರತಂಡ ಸೆಪ್ಟೆಂಬರ್ 28ಕ್ಕೆ ಮುಂದೂಡಿತ್ತು. ಈಗ ‘ಆದಿಪುರುಷ್’ ಜೂನ್ 16ರಂದು ಬಿಡುಗಡೆಯಾಗಲಿದ್ದು, ಆ ಕಾರಣದಿಂದಾಗಿ ‘ಸಲಾರ್’ಅನ್ನು ಮತ್ತೊಮ್ಮೆ ಮುಂದೂಡಲು ಚಿತ್ರತಂಡದವರು ಯೋಚಿಸುತ್ತಿದ್ದಾರೆ ಎನ್ನಲಾಗಿದೆ. ಅದಕ್ಕೆ ಕಾರಣ, ಎರಡೂ ಚಿತ್ರಗಳು ಪ್ಯಾನ್ ಇಂಡಿಯಾ ಮಟ್ಟದಲ್ಲಿ, ಪಂಚಭಾಷೆಗಳಲ್ಲಿ, ಅದ್ದೂರಿ ವೆಚ್ಚದಲ್ಲಿ ಮೂಡಿಬರುತ್ತಿದ್ದು,ರಿಲೀಸ್ ಅಂತರ ಆರು ತಿಂಗಳು ಇದ್ದರೆ ಪ್ರಚಾರಕ್ಕೆ ಸಹಕಾರಿಯಾಗಲಿದೆ ಎಂಬುದು ಚಿತ್ರತಂಡದ ಅಭಿಪ್ರಾಯ. ಹೀಗಾಗಿ ‘ಸಲಾರ್’ ಚಿತ್ರವನ್ನು 2023ರ ವರ್ಷದಂತ್ಯಕ್ಕೆ ಅಥವಾ 2024ರ ಜನವರಿಯಲ್ಲಿ ಬಿಡುಗಡೆ ಮಾಡುವ ಕುರಿತು ಚರ್ಚೆ ನಡೆಯುತ್ತಿದೆ ಎನ್ನಲಾಗುತ್ತಿದೆ.

ಈ ಚಿತ್ರಗಳ ಜತೆ ಪ್ರಭಾಸ್ ‘ಪ್ರಾಜೆಕ್ಟ್ ಕೆ’ ಎಂಬ ಮತ್ತೊಂದು ಚಿತ್ರದಲ್ಲಿ ನಟಿಸುತ್ತಿದ್ದು, ಅದು ಕೂಡ ಮುಂದಿನ ವರ್ಷದಂತ್ಯಕ್ಕೆ ಸಿದ್ಧವಾಗಲಿದೆ. ಆದರೆ, ಈಗ ‘ಆದಿಪುರುಷ್’ ತಡವಾಗುತ್ತಿರುವ ಕಾರಣ, ‘ಸಲಾರ್’ ಮತ್ತು ‘ಪ್ರಾಜೆಕ್ಟ್ ಕೆ’ ಕೂಡ ಮುಂದೂಡಲ್ಪಡುವ ಸಾಧ್ಯತೆಯಿದೆ ಎನ್ನಲಾಗಿದೆ. (ಏಜೆನ್ಸೀಸ್)