ಸಿನಿವಾಣಿ

ಸುಶಾಂತ್​ ಸಾವಿನಿಂದ ಮೈಲೇಜ್​ ತಗೋಬೇಡಿ ...

ಸುಶಾಂತ್​ ಸಿಂಗ್​ ರಜಪೂತ್​ ಸಾವಿನ ನಂತರ, ಸೋಷಿಯಲ್​ ಮೀಡಿಯಾ ಪೂರ್ತಿ ಸಂತಾಪದ ಮೆಸೇಜ್​ಗಳೇ ತುಂಬಿವೆ. ಇನ್ನು ಕೆಲವರು, ಸುಶಾಂತ್​ ಪರ ಮಾತನಾಡುವ ಭರದಲ್ಲಿ, ಚಿತ್ರರಂಗವನ್ನು ಕೆಟ್ಟದಾಗಿ ಬಿಂಬಿಸುತ್ತಿದ್ದಾರೆ. ಸಾಮಾನ್ಯವಾಗಿ ಹೆಚ್ಚು ಮಾತನಾಡದ ಸೈಫ್​ ಅಲಿ ಖಾನ್​ ಈ ಬಗ್ಗೆ ಸಿಟ್ಟಾಗಿದ್ದು, ಸುಶಾಂತ್​ ಸಾವಿನಿಂದ ಮೈಲೇಜ್​ ತೆಗೋಬೇಡಿ ಎಂದಿದ್ದಾರೆ.

ಸಂದರ್ಶನವೊಂದರಲ್ಲಿ ಮಾತನಾಡಿರುವ ಅವರು, ಸುಶಾಂತ್​ ಸಾವು ನಿಜಕ್ಕೂ ಎಲ್ಲರಿಗೂ ಆಘಾತ ತಂದಿದೆ. ಇಷ್ಟು ದಿನ ಆದರೂ, ಆ ಬಗ್ಗೆ ಏನು ಹೇಳಬೇಕು ಅಂತಲೇ ತೋಚುತ್ತಿಲ್ಲ. ಆದರೆ, ಕೆಲವರು ಅಷ್ಟರಲ್ಲೇ ಏನೇನೋ ಮಾತಾಡಿದ್ದಾರೆ. ಸುಶಾಂತ್​ ದುರಂತ ಸಾವಿನಿಂದ ಮೈಲೇಜ್​ ತೆಗೆದುಕೊಳ್ಳುವುದನ್ನು ಮೊದಲು ನಿಲ್ಲಿಸಿ. ಸುಶಾಂತ್​ ಬಗ್ಗೆ ಎಷ್ಟೊಂದು ಜನರಿಗೆ ನಿಜಕ್ಕೂ ಅಷ್ಟೊಂದು ಪ್ರೀತಿ, ಮಮತೆ ಇತ್ತೋ ಅಥವಾ ಇಷ್ಟೆಲ್ಲಾ ಆಗುತ್ತಿರುವಾಗ ನನಗೂ ಒಂದಿಷ್ಟು ಪ್ರಚಾರ ಸಿಗಲಿ ಎಂದು ಮಾತಾಡುತ್ತಿದ್ದಾರೋ ಗೊತ್ತಿಲ್ಲ ಎಂದು ಸೈಫ್​ ಅಭಿಪ್ರಾಯಪಟ್ಟಿದ್ದಾರೆ.

ಈ ಕುರಿತು ಇನ್ನಷ್ಟು ಮಾತಾಡಿರುವ ಅವರು. ಸುಶಾಂತ್​ ಬಗ್ಗೆ ಗೌರವವಿದ್ದರೆ, ಅವರ ಸಾವಿನ ಬಗ್ಗೆ ಬೇಸರವಿದ್ದರೆ, ಒಂದೆರೆಡು ದಿನ ಮೌನವಾಗಿರಿ. ಅದು ಬಿಟ್ಟು, ಏನೇನೋ ಮಾತನಾಡುವುದು ತಪ್ಪು. ಅದರಲ್ಲೂ ಯಾರ ಬಗ್ಗೆಯೂ ಕೇರ್​ ಮಾಡದ ಜನ ಸಹ, ಸುಶಾಂತ್​ ಸಾವಿನ ಬಗ್ಗೆ ಬೇಸರ ಮಾಡಿಕೊಳ್ಳುತ್ತಿರುವುದು ನಿಜಕ್ಕೂ ಆಶ್ಚರ್ಯ ತರಿಸಿದೆ. ಇದ್ದಾಗ ಕೇರ್​ ಮಾಡದಿದ್ದವರೆಲ್ಲಾ, ಈಗ ಅಷ್ಟೆಲ್ಲಾ ನಾಟಕ ಮಾಡುತ್ತಿರುವುದು ಹಿಪಾಕ್ರಸಿ ಅಲ್ಲದೆ ಮತ್ತಿನ್ನೇನು. ಇದು ಸತ್ತವರಿಗೆ ಮಾಡುತ್ತಿರುವ ಅವಮಾನ. ಈ ಸಮಯದಲ್ಲಿ ನಾವು ಬಾಯಿಗೆ ಬಂದಂತೆ ಮಾತನಾಡುವುದನ್ನು ಬಿಟ್ಟು, ಆತ್ಮಾವಲೋಕನ ಮಾಡಿಕೊಳ್ಳಬೇಕಿದೆ ಎಂದು ಸೈಫ್​ ಹೇಳಿದ್ದಾರೆ.

ಬರೀ ಇದೊಂದು ಪ್ರಕರಣವಷ್ಟೇ ಅಲ್ಲ, ಕಾಲ ಸಾಕಷ್ಟು ಬದಲಾಗಿದೆ ಎಂದು ಹೇಳಿರುವ ಸೈಫ್​, ನಾವು ಇವತ್ತು ಎಂಥಾ ಕಾಲಘಟ್ಟದಲ್ಲಿದ್ದೇವೆ ಎಂದರೆ, ಟ್ವಿಟರ್​ನಲ್ಲಿ ಯಾರದೋ ಬಗ್ಗೆ ಹೊಗಳಿ ಹೊಗಳಿ ಬರೆಯುತ್ತೇವೆ. ಅವರು ಎದುರು ಸಿಕ್ಕಾಗ ಅವರನ್ನು ಮಾತನಾಡಿಸುವುದಕ್ಕೂ ಹೋಗುವುದಿಲ್ಲ. ಇನ್ನು ಹುಟ್ಟುಹಬ್ಬಕ್ಕೆ ಮೆಸೇಜ್​ ಮಾಡಿ ಹಾರೈಸುತ್ತಾರೆ, ಕನಿಷ್ಠ ಫೋನ್​ ಸಹ ಮಾಡುವುದಿಲ್ಲ. ಸಂಪಕರ್ವ ಕಡಿಮೆಯಾಗುತ್ತಿದೆ ಎಂದು ಸೈಫ್​ ಹೇಳಿಕೊಂಡಿದ್ದಾರೆ.

ಇನ್ನು ನಟ-ನಿರ್ದೇಶಕ ಫರ್ಹಾನ್​ ಖಾನ್​ ಸಹ, ಸುಶಾಂತ್​ ಸಾವಿನ ಕುರಿತಾಗಿ ವಿಪರೀತ ಮಾತನಾಡುತ್ತಿರುವ ಬಗ್ಗೆ ಸಿಟ್ಟಾಗಿದ್ದು, ಅಂತವರಿಗೆ ಮೊಸಳೆ ಕಣ್ಣೀರು ಸುರಿಸುವವರು ಎಂದು ಪದ್ಯದ ಮೂಲಕ ಲೇವಡಿ ಮಾಡಿದ್ದಾರೆ.