ಸಾಯಿಪಲ್ಲವಿ ಸೋಮವಾರವಷ್ಟೇ ಹುಟ್ಟುಹಬ್ಬವನ್ನು ಆಚರಿಸಿಕೊಂಡಿದ್ದಾರೆ. 30 ವರ್ಷ ಮುಗಿಸಿ, 31ಕ್ಕೆ ಕಾಲಿಟ್ಟಿರುವ ಅವರಿಗೆ ಎರಡು ಭರ್ಜರಿ ಗಿಫ್ಟ್ಗಳು ಸಿಕ್ಕಿವೆ. ಕಮಲ್ ಹಾಸನ್ ನಿರ್ವಣದ ಚಿತ್ರವೊಂದಕ್ಕೆ ಸಾಯಿಪಲ್ಲವಿ ನಾಯಕಿಯಾಗಿ ಆಯ್ಕೆಯಾಗಿದ್ದರೆ, ‘ಗಾರ್ಗಿ’ ಎಂಬ ಇನ್ನೊಂದು ಚಿತ್ರವು ಅಧಿಕೃತವಾಗಿ ಘೋಷಣೆಯಾಗಿದೆ.
ಮೊದಲಿಗೆ ಹೊಸ ಚಿತ್ರದಿಂದ ಪ್ರಾರಂಭಿಸೋಣ. ಕಮಲ್ ಹಾಸನ್ ಒಡೆತನದ ರಾಜ್ಕಮಲ್ ಫಿಲಂಸ್ ಇಂಟರ್ನ್ಯಾಷನಲ್ ಸಂಸ್ಥೆಯು ಚಿತ್ರವೊಂದನ್ನು ನಿರ್ವಿುಸುತ್ತಿದ್ದು, ರಾಜಕುಮಾರ್ ಪೆರಿಯಸ್ವಾಮಿ ನಿರ್ದೇಶಿಸುತ್ತಿದ್ದಾರೆ. ಈ ಚಿತ್ರದಲ್ಲಿ ಶಿವಕಾರ್ತಿಕೇಯನ್ ನಾಯಕನಾಗಿ ನಟಿಸುತ್ತಿದ್ದು, ನಾಯಕಿಯಾಗಿ ಸಾಯಿಪಲ್ಲವಿ ಅಭಿನಯಿಸಲಿದ್ದಾರೆ. ಅವರನ್ನು ಖುದ್ದು ಕಮಲ್ ಹಾಸನ್ ಚಿತ್ರತಂಡಕ್ಕೆ ಆಪ್ತವಾಗಿ ಬರಮಾಡಿಕೊಂಡಿದ್ದು, ಹುಟ್ಟುಹಬ್ಬಕ್ಕೆ ಶುಭಕೋರಿದ್ದಾರೆ. ಇನ್ನು, ಸಾಯಿಪಲ್ಲವಿ ಅಭಿನಯದ ‘ಗಾರ್ಗಿ’ ಎಂಬ ಹೊಸ ಚಿತ್ರ ಅಧಿಕೃತವಾಗಿ ಘೋಷಣೆಯಾಗಿದೆ.
ಹೊಸ ಚಿತ್ರ ಎನ್ನುವುದಕ್ಕಿಂತ ಈಗಾಗಲೇ ಚಿತ್ರದ ಚಿತ್ರೀಕರಣ ಪ್ರಾರಂಭವಾಗಿದೆ. ಆದರೆ, ಚಿತ್ರತಂಡದವರು ಈ ವಿಷಯವನ್ನು ಬಹಿರಂಗಪಡಿಸಿರಲಿಲ್ಲ. ಈ ಕುರಿತು ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿರುವ ಸಾಯಿಪಲ್ಲವಿ, ‘ಈ ಚಿತ್ರದ ಬಗ್ಗೆ ಮಾತನಾಡುವುದಕ್ಕೆ ಹಲವು ತಿಂಗಳುಗಳಿಂದ ಕಾದಿದ್ದೆ. ಆದರೆ, ಚಿತ್ರತಂಡದವರು ಒಪ್ಪಿರಲಿಲ್ಲ. ಈಗ ನನ್ನ ಹುಟ್ಟುಹಬ್ಬದ ಪ್ರಯುಕ್ತ ಚಿತ್ರದ ಬಗ್ಗೆ ಮಾತನಾಡುವುದಕ್ಕೆ ಒಪ್ಪಿಗೆ ಕೊಟ್ಟಿದೆ’ ಎನ್ನುತ್ತಾರೆ ಸಾಯಿಪಲ್ಲವಿ.