Madenuru Manu : ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆದ ಆಡಿಯೋವೊಂದರಲ್ಲಿ ಕನ್ನಡ ಚಿತ್ರರಂಗದ ಶಿವಣ್ಣ ಎಂದೇ ಹೆಸರಾದ ಕರುನಾಡ ಚಕ್ರವರ್ತಿ ಶಿವರಾಜ್ಕುಮಾರ್ ವಿರುದ್ಧ ನಾಲಿಗೆ ಹರಿಬಿಟ್ಟ ಮಡೆನೂರು ಮನು ವಿರುದ್ಧ ನವರಾಸನಾಯಕ ಜಗ್ಗೇಶ್, ಹೆಸರೇಳದೇ ತಿರುಗೇಟು ನೀಡಿದ್ದಾರೆ.
ತಮ್ಮ ಎಕ್ಸ್ ಖಾತೆಯಲ್ಲಿ ಬರೆದುಕೊಂಡಿರುವ ಜಗ್ಗೇಶ್, ಶಿವರಾಜ್ಕುಮಾರ್ ಚಿತ್ರರಂಗದ ಕಿರೀಟ ಇದ್ದಂತೆ. ಎಲ್ಲರನ್ನು ಪ್ರೀತಿಸುವ ಜೀವ. ಅಂಥವರ ಸಾವು ಬಯಸಿದವರಿಗೆ ಕೇಡುಗಾಲ ಕಾದಿದೆ. ನೊಂದುಕೊಳ್ಳದಿರಿ ಶಿವಣ್ಣ ನೀವು ಹಿಮಾಲಯ. ನಿಮಗೆ ಧೀರ್ಘಾಯುಷ್ಯ ಪ್ರಾಪ್ತಿ ಇದೆ. ನಿಮ್ಮ ಹೆತ್ತವರು, ಕನ್ನಡಿಗರ ಆಶೀರ್ವಾದ ಇದೆ ಎಂದು ಹೇಳಿದ್ದಾರೆ.
ಮತ್ತೊಂದು ಟ್ವೀಟ್ನಲ್ಲಿ, ಒಂದು ಗಾದೆ ಮಾತು ನನಗೆ ನೆನಪಾಯಿತು. ಅಲ್ಪನಿಗೆ ಐಶ್ವರ್ಯ ಬಂದ್ರೆ ಅರ್ಧ ರಾತ್ರೀಲಿ ಕೊಡೆ ಹಿಡಿದಂಗೆ. ಗುರುಹಿರಿಯರ ಮೇಲೆ ಗೌರವ ತೋರದವನು ಗೆದ್ದ ಇತಿಹಾಸ ಇಲ್ಲಾ! ಇಂದು ಇದ್ದದ್ದು ನಾಳೆ ಇರದು, ಅಹಂಕಾರ ಬಿಡಿ ಅಂಬೆಗಾಲು ಇಡುತ್ತಿರುವ ಕೂಸುಗಳೆ! ಆಯುಷ್ಯ ಬರೆಯೋದು ಬ್ರಹ್ಮ, ಚಿಲ್ಲರೆ ಮನುಷ್ಯರಲ್ಲಾ! ಇಂದಿನ ಚಿತ್ರರಂಗದ ಅಸಹ್ಯ ಕಂಡು ದುಃಖವಾಯಿತು ಎಂದು ಜಗ್ಗೇಶ್ ಬೇಸರ ಹೊರಹಾಕಿದ್ದಾರೆ.
ನಟ ಶಿವರಾಜ್ಕುಮಾರ್ ಇನ್ನು ಐದಾರು ವರ್ಷ ಬದುಕಿದರೆ ಹೆಚ್ಚು, ಆನಂತರ ಅವರು ಸತ್ತು ಹೋಗುತ್ತಾರೆ. ನಟ ದರ್ಶನ್ ಅಂತೂ ಈಗಾಗಲೇ ಸತ್ತು ಹೋಗಿದ್ದಾನೆ. ಇನ್ನು ನಾಲ್ಕು ವರ್ಷ ಆತನಿಗೆ ಕ್ರೇಜ್ ಇದ್ರೆ ಅದೇ ಹೆಚ್ಚು. ಶೀಘ್ರದಲ್ಲೇ ಅವನ ಕ್ರೇಜ್ ಕಡಿಮೆಯಾಗಲಿದೆ. ಇನ್ನು ನಟ ಧ್ರುವ ಸರ್ಜಾ ಹೆಚ್ಚೆಂದರೆ 8 ವರ್ಷ ಮಾತ್ರ ಆತನ ಮಾರ್ಕೆಟ್ ಇರಲಿದೆ. ಆಮೇಲೆ ಮಾರ್ಕೆಟ್ ಬಿದ್ದು ಹೋಗಲಿದೆ. ಈ ಮೂರು ಮಂದಿಯ ನಡುವೆ ಕಾಂಪಿಟೇಶನ್ ಕೊಡಲು ನಿಂತಿರುವ ಗಂಡು ಗಲಿ ಕಣ್ರಿ ನಾನು ಎಂದು ಕುಡಿದ ಅಮಲಿನಲ್ಲಿ ಮಡೆನೂರು ಮನು ನಾಲಿಗೆ ಹರಿಬಿಟ್ಟಿದ್ದಾನೆ.
ಇನ್ನು ಆಡಿಯೋದಲ್ಲಿರುವುದು ಮಡೆನೂರು ಮನು ಅವರ ಧ್ವನಿಯೇ ಎಂಬುದು ಖಚಿತವಾಗಿಲ್ಲ. ಆದರೆ, ಸದ್ಯದ ವಿವಾದದ ನಡುವೆ ಈ ಆಡಿಯೋ ಭಾರಿ ಸಂಚಲನ ಮೂಡಿಸಿದೆ. ಆಡಿಯೋ ಕೇಳಿದ ಬಹುತೇಕ ಮಂದಿ ಇದು ಮನು ಅವರದ್ದೇ ಧ್ವನಿ ಎನ್ನುತ್ತಿದ್ದಾರೆ. ಯಾವುದೂ ಎಣ್ಣೆ ಪಾರ್ಟಿಯ ಸಮಯದಲ್ಲಿ ಕಂಠಪೂರ್ತಿ ಕುಡಿದು ಈ ರೀತಿ ಅಹಂಕಾರದಿಂದ ಮಾತನಾಡಿದ್ದಾನೆ. ಆ ಸಂದರ್ಭದಲ್ಲಿ ಆತನ ಸ್ನೇಹಿತರೇ ಆಡಿಯೋ ರೆಕಾರ್ಡ್ ಮಾಡಿ, ವಿವಾದದ ನಡುವೆ ಹರಿಬಿಟ್ಟಿದ್ದಾರೆ ಎಂದು ಮಾತನಾಡಿಕೊಳ್ಳುತ್ತಿದ್ದಾರೆ.
ಇನ್ನು ಮಡೆನೂರು ಮನು ಅವರದ್ದು ಎನ್ನಲಾದ ಆಡಿಯೋ ಕೇಳಿದ ಅಭಿಮಾನಿಗಳು ಆತನ ವಿರುದ್ಧ ಟೀಕಾ ಪ್ರಹಾರ ನಡೆಸಿದ್ದಾರೆ. ಕಾಮಿಡಿ ಕಿಲಾಡಿಗಳು ಶೋನಿಂದ ಬಂದ ಯಶಸ್ಸು ಈತನ ನೆತ್ತಿಗೇರಿದೆ. ಮೊದಲ ಸಿನಿಮಾಗೆ ಇಷ್ಟೊಂದು ಅಹಂಕಾರ ಇರಬಾರದು. ಹಿರಿಯರಿಗೆ ಗೌರವ ಕೊಡುವುದನ್ನು ಮೊದಲು ಕಲಿಯಬೇಕು. ಈತ ಖಂಡಿತ ಏಳಿಗೆ ಹೊಂದುವುದಿಲ್ಲ ಎಂದೆಲ್ಲ ಕಾಮೆಂಟ್ ಮಾಡುತ್ತಿದ್ದಾರೆ.
ಅಂದಹಾಗೆ, ಒಂದು ಕಡೆ ತಮ್ಮ ಅಭಿನಯದ ಕುಲದಲ್ಲಿ ಕೀಳ್ಯಾವುದೋ ಸಿನಿಮಾ ಬಿಡುಗಡೆಯಾಗಿದೆ. ಇನ್ನೊಂದೆಡೆ ಸಹನಟಿಯ ಮೇಲಿನ ಅತ್ಯಾಚಾರ ಆರೋಪದ ಹಿನ್ನೆಲೆಯಲ್ಲಿ ಬಂಧನವಾಗಿ ಜೈಲು ಪಾಲಾಗಿದ್ದಾರೆ. ಇದು ಕಾಮಿಡಿ ಕಿಲಾಡಿಗಳು ಖ್ಯಾತಿಯ ಮಡೆನೂರು ಮನು ಅವರ ಸದ್ಯದ ಪರಿಸ್ಥಿತಿ. ಪ್ರಸ್ತುತ ಈ ಒಂದು ವಿವಾದ ಕರ್ನಾಟಕದಲ್ಲಿ ಭಾರಿ ಸದ್ದು ಮಾಡುತ್ತಿದೆ. ತನಗೆ ಬಲವಂತದಿಂದ ಎಣ್ಣೆ ಕುಡಿಸಿ, ಲೈಂಗಿಕ ದೌರ್ಜನ್ಯ ಎಸಗಿದ್ದಾನೆ. ಅಲ್ಲದೆ, ವಿಡಿಯೋ ರೆಕಾರ್ಡ್ ಕೂಡ ಮಾಡಿಕೊಂಡಿದ್ದಾನೆ ಎಂದು ಆರೋಪಿಸಿ ಮಡೆನೂರು ಮನು ವಿರುದ್ಧ ಸಹನಟಿ ಗಂಭೀರ ಆರೋಪ ಮಾಡಿದ್ದು, ಎಫ್ಐಆರ್ ದಾಖಲಿಸಿರುವ ಅನ್ನಪೂರ್ಣೇಶ್ವರಿ ನಗರ ಠಾಣಾ ಪೊಲೀಸರು ಆರೋಪಿ ಮನುರನ್ನು ಬಂಧಿಸಿದ್ದಾರೆ. ಈ ಪ್ರಕರಣದ ತನಿಖೆ ನಡೆಯುತ್ತಿರುವಾಗಲೇ ಮಡೆನೂರು ಮನುಗೆ ಸಂಬಂಧಿಸಿದ್ದು ಎನ್ನಲಾದ ಆಡಿಯೋ ವೈರಲ್ ಆಗಿದೆ. ಹೀಗಾಗಿ ಅನೇಕರು ಮನು ವರ್ತನೆ ವಿರುದ್ಧ ತಿರುಗಿಬಿದ್ದಿದ್ದಾರೆ.