ಸಿನಿವಾಣಿ

ನಟ ರಾಜಶೇಖರ್‌ ದಂಪತಿಗೆ ಕರೊನಾ: ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ

suchetana

ಹೈದರಾಬಾದ್‌: ತೆಲಗುವಿನ ಖ್ಯಾತ ನಟ ರಾಜಶೇಖರ್‌ ಅವರಿಗೆ ಕರೊನಾ ಸೋಂಕು ಕಾಣಿಸಿಕೊಂಡಿದ್ದು, ಅವರನ್ನು ತೀವ್ರನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಅಕ್ಟೋಬರ್ 17 ರಂದು ನಟ ರಾಜಶೇಖರ್ ದಂಪತಿ ಹಾಗೂ ಮಕ್ಕಳಾದ ಶಿವಾನಿ ಮತ್ತು ಶಿವಾತ್ಮಿಕಗೆ ಸೊಂಕು ದೃಢಪಟ್ಟಿತ್ತು. ನಂತರ ಮಕ್ಕಳು ಗುಣಮುಖರಾದರು. ಪತ್ನಿ ಜೀವಿತಾ ಚಿಕಿತ್ಸೆ ಪಡೆಯುತ್ತಿದ್ದಾರೆ. ಆದರೆ ಹೈದರಾಬಾದ್‌ನ ಖಾಸಗಿ ಆಸ್ಪತ್ರೆಯಲ್ಲಿರುವ ರಾಜಶೇಖರ್ ಅವರ ಆರೋಗ್ಯ ಕ್ಷೀಣಿಸುತ್ತಾ ಬಂದಿರುವುದಾಗಿ ಆಸ್ಪತ್ರೆ ಮೂಲಗಳು ಹೇಳಿದ್ದವು.

ರಾಜಶೇಖರ್ ಪುತ್ರಿ ಶಿವಾತ್ಮಿಕ ಸಾಮಾಜಿಕ ಜಾಲತಾಣದಲ್ಲಿ ತಂದೆಯ ಆರೋಗ್ಯದ ಬಗ್ಗೆ ಮಾಹಿತಿ ಹಂಚಿಕೊಂಡಿದ್ದು, 'ಅಪ್ಪ ಕರೊನಾ ವೈರಸ್ ಜತೆಗೆ ಕಠಿಣವಾದ ಹೋರಾಟ ಮಾಡುತ್ತಿದ್ದಾರೆ. ಅವರ ಸ್ಥಿತಿ ಗಂಭೀರವಾಗಿದೆ ಎಂದಿದ್ದಾರೆ. 'ಅಪ್ಪ ಕರೊನಾ ಜತೆಗೆ ಕಠಿಣವಾದ ಹೋರಾಟದಲ್ಲಿ ನಿರತರಾಗಿದ್ದಾರೆ, ದಯವಿಟ್ಟು ನೀವುಗಳು ಅವರ ಆರೋಗ್ಯ ಚೇತರಿಕೆಗಾಗಿ ಪ್ರಾರ್ಥಿಸಿ, ನಿಮ್ಮ ಪ್ರೀತಿ ಮತ್ತು ಆಶೀರ್ವಾದವೇ ನಮ್ಮನ್ನು ಗಟ್ಟಿಗೊಳಿಸಬಲ್ಲದು' ಎಂದು ತಿಳಿಸಿದ್ದರು.

ನಂತರ ಅವರು ಇನ್ನೊಂದು ಟ್ವೀಟ್‌ ಮಾಡಿ ಆರೋಗ್ಯ ಸ್ಥಿರವಾಗಿದೆ ಎಂದು ಹೇಳಿದ್ದಾರೆ. ಆಸ್ಪತ್ರೆಯಿಂದ ಬಿಡುಗಡೆ ಮಾಡಿರುವ ಬುಲೆಟಿನ್‌ ಪ್ರಕಾರ, ರಾಜ್‌ಶೇಖರ್‌ ಅವರಿಗೆ ಇನ್ನೂ ಐಸಿಯುವಿನಲ್ಲಿಯೇ ಚಿಕಿತ್ಸೆ ಮುಂದುವರೆಸಲಾಗಿದೆ. ಪತ್ನಿ ಜೀವಿತಾ ಅವರಿಗೂ ಚಿಕಿತ್ಸೆ ಮುಂದುವರೆದಿದೆ.