ಬೆಂಗಳೂರು: ಕನ್ನಡದ ಹಿರಿಯ ನಟ-ನಿರ್ದೇಶಕ ಈ ಹಿಂದೆ ನವರಸ ಫಿಲ್ಮ್ ಅಕಾಡೆಮಿ ಎಂಬ ನಟನಾಶಾಲೆಯಲ್ಲಿ ನಟನೆಯ ಪಾಠ ಹೇಳಿಕೊಡುತ್ತಿದ್ದರು. ಹಲವು ವಿದ್ಯಾರ್ಥಿಗಳನ್ನು ತಯಾರು ಮಾಡಿದವರು. ಈಗ ಅವರ ಮಗ ಪವನ್ ಎಸ್ ನಾರಾಯಣ್ ಕಲಾ ಸಾಮ್ರಾಟ್ ಫಿಲ್ಮ್ ಅಕಾಡೆಮಿ ಎಂಬ ಹೊಸ ಅಭಿನಯ ಶಾಲೆಯನ್ನು ಪ್ರಾರಂಭಿಸಿದ್ದಾರೆ. ಇಲ್ಲೂ ಸಹ ನಾರಾಯಣ್ ತಮಗೆ ಗೊತ್ತಿರುವ ಹಲವು ವಿಷಯಗಳನ್ನು ವಿದ್ಯಾರ್ಥಿಗಳಿಗೆ ಹೇಳಿಕೊಡಲಿದ್ದಾರಂತೆ.
ಇತ್ತೀಚೆಗೆ ಹಿರಿಯ ನಿರ್ದೇಶಕ ಮತ್ತು ಎಸ್. ನಾರಾಯಣ್ ಅವರ ಗುರು ಭಾರ್ಗವ ಈ ನೂತನ ಸಿನಿಮಾ ಶಾಲೆಯನ್ನು ಉದ್ಘಾಟಿಸಿದರು. ಹಿರಿಯ ನಟರಾದ ಮುಖ್ಯಮಂತ್ರಿ ಚಂದ್ರು, ಸುಂದರರಾಜ್, ವಿ.ಮನೋಹರ್, ಎಂ.ಎನ್ ಸುರೇಶ್, ನಾಯಕ ಆದಿತ್ಯ ಹಾಗೂ ನಾಯಕಿ ಅದಿತಿ ಪ್ರಭುದೇವ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಈ ಅಭಿನಯ ಶಾಲೆಯ ಕುರಿತು ಮಾತನಾಡಿದ ನಾರಾಯಣ್, 'ನನ್ನ ಮಗ ಪವನ್ ನನ್ನ ಜೊತೆಯಿದ್ದು ಸಾಕಷ್ಟು ಅನುಭವ ಪಡೆದುಕೊಂಡಿದ್ದಾನೆ. ಈಗ ಕಲಾ ಸಾಮ್ರಾಟ್ ಫಿಲ್ಮ್ ಅಕಾಡೆಮಿ ಅರಂಭಿಸಿದ್ದಾನೆ. ಈ ವಿಷಯ ಕುರಿತು ನನ್ನ ಬಳಿ ಪವನ್ ಹೇಳಿದಾಗ, ಕಲಾ ಸಾಮ್ರಾಟ್ ಎಂಬ ಹೆಸರಿಗೆ ಕಪ್ಪುಚುಕ್ಕೆ ಬರದಂತೆ ನೋಡಿಕ್ಕೊಳ್ಳುವ ಜವಾಬ್ದಾರಿ ನಿನ್ನದು. ಏಕೆಂದರೆ, ಎಸ್ ನಾರಾಯಣ್ ಎಂದು ನನ್ನ ತಂದೆಯಿಟ್ಟ ಹೆಸರು. 'ಕಲಾ ಸಾಮ್ರಾಟ್' ಜನ ಕೊಟ್ಟಿದ್ದು. ಆ ಹೆಸರಿಗೆ ಏನು ಆಗಬಾರದು ಎಂದು ಹೇಳಿದ್ದೇನೆ. ಪವನ್ ಸಹ ಶ್ರದ್ಧೆಯಿಂದ ನಡೆಸಿಕೊಂಡು ಹೋಗುತ್ತಾನೆ. ನಟನೆ, ನಿರ್ದೇಶನ ಹಾಗೂ ಚಲನಚಿತ್ರದ ಹಲವಾರು ವಿಭಾಗಗಳಲ್ಲಿ ತರಬೇತಿಯನ್ನು ಇಲ್ಲಿ ನೀಡಲಾಗುವುದು' ಎನ್ನುತ್ತಾರೆ.
ಅನುಭವಿ ಕಲಾವಿದರು ಹಾಗೂ ತಂತ್ರಜ್ಞರು ತಮ್ಮ ಅನುಭವಗಳನ್ನು ವಿದ್ಯಾರ್ಥಿಗಳಿಗೆ ಈ ಶಾಲೆಯಲ್ಲಿ ಹಂಚಲಿದ್ದಾರೆ.