ರಾಜಮೌಳಿ ನಿರ್ದೇಶನದ ‘ಬಾಹುಬಲಿ 2’ ತಮಿಳು, ಹಿಂದಿ, ಮಲಯಾಳಂ, ಚೈನೀಸ್ ಭಾಷೆಗೆ ಡಬ್ ಆಗಿ ಬಿಡುಗಡೆಯಾಗಿದ್ದು ಗೊತ್ತೇ ಇದೆ. ಇತ್ತೀಚೆಗೆ ರಷ್ಯನ್ ಭಾಷೆಗೆ ಡಬ್ ಆಗಿ ಅಲ್ಲಿನ ಕಿರುತೆರೆಯಲ್ಲಿ ಪ್ರಸಾರವಾಗಿತ್ತು. ಇದೀಗ ಅದರ ಬೆನ್ನಲ್ಲೇ, ಬಾಹುಬಲಿ ಸಿನಿಮಾ ಬಗ್ಗೆ ಮತ್ತೊಂದು ಅಪ್ಡೇಟ್ ಮಾಹಿತಿ ಲಭ್ಯವಾಗಿದೆ. ಅಲ್ಲಿನ ಸಿನಿಮಾ ಅಭಿಮಾನಿಗಳು ಪ್ರಭಾಸ್ ಅವರ ಹೆಸರನ್ನು ಟ್ಯಾಟೂ ರೂಪದಲ್ಲಿ ಅಚ್ಚೆ ಒತ್ತಿಸಿಕೊಳ್ಳುತ್ತಿದ್ದಾರೆ.
ಹೌದು, ಪ್ರಭಾಸ್, ರಾಣಾ ದಗ್ಗುಬಾಟಿ, ಅನುಷ್ಕಾ ಶೆಟ್ಟಿ ಮುಂತಾದವರು ನಟಿಸಿರುವ ‘ಬಾಹುಬಲಿ 2’ ಚಿತ್ರವು ಸದ್ದಿಲ್ಲದೆ ರಷ್ಯನ್ ಭಾಷೆಗೆ ಡಬ್ ಆಗಿ, ಅಲ್ಲಿನ ಟಿವಿ ಚಾನಲ್‌ಗಳಲ್ಲಿ ಇತ್ತೀಚೆಗಷ್ಟೇ ಪ್ರಸಾರವಾಗಿತ್ತು. ಈ ವಿಷಯವನ್ನು ಭಾರತದಲ್ಲಿರುವ ರಷ್ಯನ್ ಎಂಬೆಸಿ, ಚಿತ್ರದ ತುಣುಕೊಂದನ್ನು ಹಂಚಿಕೊಂಡು, ‘ಭಾರತೀಯ ಸಿನಿಮಾಗಳಿಗೆ ರಷ್ಯಾದಲ್ಲೂ ಸಾಕಷ್ಟು ಜನಪ್ರಿಯತೆ ಇದೆ. ರಷ್ಯನ್ ಚಾನಲ್‌ನಲ್ಲಿ ಈಗ ಏನು ಪ್ರಸಾರವಾಗುತ್ತಿದೆ ನೋಡಿ. ‘ಬಾಹುಬಲಿ’ ವಿಥ್ ರಷ್ಯನ್ ವಾಯ್ಸ ಓವರ್’ ಎಂದು ಚಿತ್ರದ ಒಂದು ಕ್ಲಿಪ್ ಹಾಕಿದೆ. ಈ ಕ್ಲಿಪ್‌ನಲ್ಲಿ ‘ಬಾಹುಬಲಿ’ಯ ಬಾಯಲ್ಲಿ ರಷ್ಯನ್ ಭಾಷೆಯನ್ನು ಕೇಳಬಹುದು.
ಇದೀಗ ಅದರ ಬೆನ್ನಲ್ಲೇ ಅಲ್ಲಿನ ಪ್ರಭಾಸ್ ಅಭಿಮಾನಿಗಳು ತಮ್ಮಿಷ್ಟದ ನಾಯಕ ಹೆಸರನ್ನು ಬೆನ್ನ ಮೇಲೆ ಟ್ಯಾಟೂ ಹಾಕಿಸಿಕೊಂಡು ಅಭಿಮಾನ ಮೆರೆಯುತ್ತಿದ್ದಾರೆ. ಆ ಟ್ಯಾಟೂ ಫೋಟೋ ಎಲ್ಲೆಡೆ ವೈರಲ್ ಆಗಿದ್ದು, ಪ್ರಭಾಸ್ ಅಭಿಮಾನಿಳ ಕಣ್ಣಿಗೂ ಬಿದ್ದಿದೆ. ತಕ್ಷಣವೇ ಹಲವರು ಟ್ವೀಟ್ ಮಾಡಿ, ಧನ್ಯವಾದಗಳನ್ನು ತಿಳಿಸಿದ್ದಾರೆ. (ಏಜೆನ್ಸೀಸ್)