

ಬೆಂಗಳೂರು: ರಾಜಧಾನಿ ಬೆಂಗಳೂರನ್ನು ಕರೊನಾ ಮಹಾಮಾರಿ ಆವರಿಸುತ್ತಿದೆ. ದಿನದಿಂದ ದಿನಕ್ಕೆ ಪ್ರಕರಣಗಳು ಹೆಚ್ಚಾಗುತ್ತಿವೆ. ಲಾಕ್ಡೌನ್ಗೆ ಪಟ್ಟು ಹಿಡಿದರೂ, ಸರ್ಕಾರ ಮಾತ್ರ ರಾಜಾರೋಷವಾಗಿ ಎಲ್ಲದಕ್ಕೂ ಅನುಮತಿ ನೀಡಿ, ಇದೀಗ ತಾನೇ ಕೈ ಕೈ ಹಿಸುಕಿಕೊಳ್ಳುತ್ತಿದೆ. ಖುದ್ದು ವೈದ್ಯಕೀಯ ಶಿಕ್ಷಣ ಸಚಿವರ ಮನೆಯವರನ್ನೂ ಈ ಮಾರಿ ಬಿಟ್ಟಿಲ್ಲ. ಇದೀಗ ಹೊಸ ಅಪ್ಡೇಟ್ ಮಾಹಿತಿ ಪ್ರಕಾರ, ಸ್ಯಾಂಡಲ್ವುಡ್ ನಟ ಸುದೀಪ್ ಸಹ ಕರೊನಾ ಆತಂಕದಲ್ಲಿದ್ದಾರೆ.
ಹೌದು, ಜೆಪಿ ನಗರದ ಸುದೀಪ್ ಮನೆಗೆ ಹೊಂದಿಕೊಂಡಿರುವ ಮನೆಯಲ್ಲಿ ವಾಸವಿದ್ದ ಇಬ್ಬರಿಗೆ ಕರೊನಾ ಸೋಂಕು ಇರುವುದು ಖಚಿತವಾಗಿದ್ದು, ಇಡೀ ಏರಿಯಾದಲ್ಲಿ ಆತಂಕ ಸೃಷ್ಟಿಯಾಗಿದೆ. ವ್ಯಾಪಾರಿ ಕುಟುಂಬದ ಇಬ್ಬರಲ್ಲಿ ಕರೊನಾ ಪಾಸಿಟಿವ್ ಕಂಡುಬಂದಿದ್ದು, 40ಕ್ಕೂ ಅಧಿಕ ಮಂದಿ ಇವರ ಸಂಪರ್ಕದಲ್ಲಿದ್ದರು ಎಂಬುದು ಗೊತ್ತಾಗಿದೆ. ಇವರೆಲ್ಲರನ್ನೂ ಪತ್ತೆ ಮಾಡಿ ಕ್ವಾರಂಟೈನ್ ಮಾಡುವ ಕಾರ್ಯ ನಡೆಯುತ್ತಿದೆ. ಸೋಕಿಂತರ ಕುಟುಂಬದವರು, ಚಿಕ್ಕಪೇಟೆಯಲ್ಲಿ ವ್ಯಾಪಾರ ಮಾಡುತ್ತಿದ್ದು, ಆ ಪ್ರದೇಶದಲ್ಲಿಯೂ ಸೋಂಕು ತಗುಲಿರಬಹುದೆಂದು ಶಂಕಿಸಲಾಗಿದೆ.
ಸೋಂಕು ದೃಢಪಟ್ಟ ಹಿನ್ನೆಲೆಯಲ್ಲಿ ಜೆ.ಪಿ.ನಗರದ 6 ನೇ ಹಂತದ ರಸ್ತೆಯನ್ನು ಸೀಲ್ ಡೌನ್ ಮಾಡಲಾಗಿದೆ. ಈ ಪ್ರದೇಶದಲ್ಲಿ ವಾಹನ ಓಡಾಟ ಮತ್ತು ವ್ಯಾಪಾರ ವಹಿವಾಟನ್ನು ನಿರ್ಬಂಧಿಸಲಾಗಿದೆ.