ಸಿನಿವಾಣಿ

ಕಾಲಿವುಡ್‌ನತ್ತ ರುಕ್ಮಿಣಿ: ಮಲೇಷ್ಯಾದಲ್ಲೇ ನೆರವೇರಿತು ಚಿತ್ರದ ಮುಹೂರ್ತ

ಮಲೇಷ್ಯಾ: ಚಂದನವನಕ್ಕೆ 2019ರಲ್ಲಿ ‘ಬೀರ್‌ಬಲ್’ ಚಿತ್ರದ ಮೂಲಕ ಪದಾರ್ಪಣೆ ಮಾಡಿದ ನಟಿ ರುಕ್ಮಿಣಿ ವಸಂತ್. ಬಳಿಕ ಗಣೇಶ್ ಅಭಿನಯದ ‘ಬಾನದಾರಿಯಲ್ಲಿ’ ಹಾಗೂ ಹೇಮಂತ್ ರಾವ್ ನಿರ್ದೇಶನದ, ರಕ್ಷಿತ್ ಶೆಟ್ಟಿ ಅಭಿನಯದ ಸ್ಯಾಂಡಲ್‌ವುಡ್‌ನ ಬಹು ನಿರೀಕ್ಷಿತ ‘ಸಪ್ತ ಸಾಗರದಾಚೆ ಎಲ್ಲೋ’ ಸಿನಿಮಾಗಳಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಈ ಎರಡೂ ಚಿತ್ರಗಳು ಇನ್ನು ಬಿಡುಗಡೆಯಾಗಬೇಕಷ್ಟೆ.

ಕನ್ನಡ ಸಿನಿಮಾಗಳಲ್ಲಿ ಸದ್ಯ ಬಿಜಿಯಾಗಿರುವ ರುಕ್ಮಿಣಿ ವಸಂತ್‌ಗೆ ಕಾಲಿವುಡ್‌ನಿಂದ ಹೊಸ ಆಫರ್ ಬಂದಿದೆ. ತಮಿಳು ಚಿತ್ರರಂಗದ ಸ್ಟಾರ್ ಕಲಾವಿದ ವಿಜಯ್ ಸೇತುಪತಿ ನಾಯಕನಾಗಿರುವ ಹಾಗೂ ‘ಒರು ನಲ್ಲ ನಾಲ ಪಾತು ಸೊಲ್ರೇನ್’ ಖ್ಯಾತಿಯ ಆರ್ಮುಗ ಕುಮಾರ್ ನಿರ್ದೇಶಿಸಲಿರುವ ಹೊಸ ಚಿತ್ರಕ್ಕೆ ರುಕ್ಮಿಣಿ ನಾಯಕಿಯಾಗಿ ಬಣ್ಣ ಹಚ್ಚಲಿದ್ದಾರೆ. ಈಗಾಗಲೇ, ‘ವಿಕ್ರಮ್’, ‘ವಿಡುತಲೈ-1’ ಸೇರಿದಂತೆ ಅನೇಕ ಹಿಟ್ ಸಿನಿಮಾಗಳನ್ನು ನೀಡಿರುವ ವಿಜಯ್ ಸೇತುಪತಿ ಜತೆ ಚಿತ್ರ ಮಾಡಬೇಕು ಎಂಬುದು ಅನೇಕರು ಕನಸು ಕಾಣುತ್ತಿರುತ್ತಾರೆ. ಈ ಅವಕಾಶವನ್ನು ಕನ್ನಡದ ರುಕ್ಮಿಣಿ ವಸಂತ್ ಪಡೆದುಕೊಂಡಿದ್ದಾರೆ.

ಈ ಹೊಸ ಸಿನಿಮಾದ ಶೀರ್ಷಿಕೆ ಇನ್ನಷ್ಟೇ ಅಂತಿಮವಾಗಬೇಕಿದೆ ಹಾಗೂ ಚಿತ್ರೀಕರಣ ಮಲೇಷ್ಯಾದಲ್ಲಿ ನಡೆಯಲಿದೆ. ಇತ್ತೀಚೆಗಷ್ಟೆ ಚಿತ್ರದ ಮುಹೂರ್ತ ಮಲೇಷ್ಯಾದಲ್ಲೇ ನೆರವೇರಿದ್ದು, ಮುಂದಿನ 40 ದಿನಗಳ ಕಾಲ ಅಲ್ಲಿಯೇ ಶೂಟಿಂಗ್ ನಡೆಯಲಿದೆ. (ಏಜೆನ್ಸೀಸ್)